Kannada NewsKarnataka NewsLatest

*ಮೂವರು ಗಂಡಂದಿರನ್ನು ಬಿಟ್ಟು 4ನೇಯವನನ್ನು ಮದುವೆಯಾದ ಮಹಿಳೆ: ಹೆಚ್ ಐವಿ ಸೋಂಕು ಎಂದು ಸುದ್ದಿ ಹಬ್ಬಿಸುವುದಾಗಿ ಬೆದರಿಕೆ: ಉದ್ಯಮಿಯಿಂದ ಪತ್ನಿ ವಿರುದ್ಧ ದೂರು*

ಪ್ರಗತಿವಾಹಿನಿ ಸುದ್ದಿ: ಮೂರು ಗಂಡಂದಿರನ್ನು ಬಿಟ್ಟು ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದ ಮಹಿಳೆ ಹೆಚ್‌ಐವಿ ಸೋಂಕು ಇದೆ ಎಂಬ ಸುಳ್ಳು ಸುದ್ದಿ ಹಬ್ಬಿಸುವುದಾಗಿ ಬೆದರಿಕೆ ಹಾಕಿ ಪತಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇದರಿಂದ ಬೇಸತ್ತ ಉದ್ಯಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪತ್ನಿ ವಿರುದ್ಧವೇ ಬೆಂಗಳೂರಿನ ಉದ್ಯಮಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ. 51 ವರ್ಷದ ವ್ಯಕ್ತಿ ನೀಡಿರುವ ದೂರಿನ ಆಧಾರದಲ್ಲಿ ಮಾರತ್ತಹಳ್ಳಿ ಪೊಲೀಸರು 37 ವರ್ಷದ ಸ್ವಾತಿ ಬಿ. ವಿರುದ್ಧ ವಂಚನೆ, ನಂಬಿಕೆ ದ್ರೋಹ, ಕಳವು, ಸುಲಿಗೆ, ಮಾನಹಾನಿ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ.

Home add -Advt

ಮಾರತ್ತಹಳ್ಳಿಯಲ್ಲಿ ಕಂಪ್ಯೂಟರ್ ಏಡೆಡ್ ಡಿಸೈನ್ ಅಂಡ್ ಡ್ರಾಫ್ಟಿಂಗ್ ತರಬೇತಿ ಸಂಸ್ಥೆ ನಡೆಸುತ್ತಿರುವ ಉದ್ಯಮಿ, 2021ರ ಅಕ್ಟೋಬರ್‌ನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಸ್ವಾತಿಯನ್ನು ಪರಿಚಯಿಸಿಕೊಂಡು 2022ರ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ವಿವಾಹದ ನಂತರ ಮಹಿಳೆ ತನ್ನ ಅಸಲಿ ಮುಖ ತೋರಿಸಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಸುಳ್ಳು ಆರೋಪಗಳನ್ನು ಹರಡುತ್ತೇನೆ ಎಂದು ಉದ್ಯಮಿಯಾಗಿರುವ ಪತಿಗೆ ಬೆದರಿಕೆ ಹಾಕಿದ್ದಾಳೆ. 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ ಏಡ್ಸ್‌ ಇದೆ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದಾಗಿ ಸುಳ್ಳು ಪ್ರಚಾರ ಮಾಡುವುದಾಗಿ ತನಗೆ ಬೆದರಿಸಿದ್ದಾಳೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಿಂದ 18 ಲಕ್ಷ ನಗದು, ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವುದಲ್ಲದೆ, ನಕಲಿ ಕೀಲಿ ಬಳಸಿ ಕಾರು ಕೂಡ ತೆಗೆದುಕೊಂಡು ಹೋಗಿದ್ದಾಳೆ. ಸಾಲದ್ದಕ್ಕೆ ಕಚೇರಿಗೆ ಹಾನಿ ಮಾಡುವ ಜೊತೆಗೆ ಚೆಕ್‌ಗೆ ನಕಲಿ ಸಹಿ ಹಾಕಿ ಬ್ಯಾಂಕ್ ಖಾತೆಯಿಂದ 83 ಸಾವಿರ ಹಣ ಡ್ರಾ ಮಾಡಿಕೊಂಡಿರುವುದಾಗಿ ಕೂಡ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ತನ್ನನ್ನು ಮದುವೆಯಾಗುವ ಮೊದಲು ಆಕೆ ಮೂರು ಬಾರಿ ಮದುವೆಯಾಗಿದ್ದಳು. ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ ಎಂದು ಹೇಳಿಕೊಂಡು, ನನ್ನ ವಿರುದ್ಧ ಏನು ಬೇಕಾದರೂ ಮಾಡಬಲ್ಲೆ ಎಂದು ಆಗಾಗ ಬೆದರಿಸುತ್ತಿದ್ದಳು ಎಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related Articles

Back to top button