ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ರಾಜ್ಯದ 15 ಕ್ಷೇತ್ರಗಳಲ್ಲಿ ಡಿ.5ರಂದು ನಡೆಯಲಿರುವ ಉಪಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದೆ. ಸೋಮವಾರ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.
ಮಾದರಿ ನೀತಿ ಸಂಹಿತೆ ತಕ್ಷಣದಿಂದಲೇ ಆರಂಭವಾಗಿದೆ. ಕೆಲವೆಡೆ ಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಮಾತ್ರ ನೀತಿ ಸಂಹಿತೆ ಅನ್ವಯವಾದರೆ ಕೆಲವೆಡೆ ಸಂಪೂರ್ಣ ಜಿಲ್ಲೆಗೆ ಅನ್ವಯವಾಗಲಿದೆ.
ಬೆಳಗಾವಿ ಜಿಲ್ಲೆಯಲ್ಲಿ ಅಥಣಿ, ಕಾಗವಾಡ ಹಾಗೂ ಗೋಕಾಕ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಕ್ಷೇತ್ರಗಳ ವ್ಯಾಪ್ತಿಗೆ ಮಾತ್ರ ನೀತಿಸಂಹಿತೆ ಅನ್ವಯವಾಗಲಿದೆ. ವಿಜಯ ನಗರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿ ನಗರ ಹಾಗೂ ಹುಣಸೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಕ್ಷೇತ್ರಕ್ಕಷ್ಟೆ ನೀತಿಸಂಹಿತೆ ಜಾರಿಯಾಗಿದೆ.
ಯಲ್ಲಾಪುರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು ಸಂಪೂರ್ಣ ಉತ್ತರ ಕನ್ನಡ ಜಿಲ್ಲೆಗೆ ನೀತಿಸಂಹಿತೆ ಜಾರಿಯಾಗಿದೆ. ಹಿರೆಕೆರೂರು ಮತ್ತು ರಾಣೆಬೆನ್ನೂರು ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಹಾವೇರಿ ಜಿಲ್ಲೆಗೆ ನೀತಿಸಂಹಿತೆ ಅನ್ವಯವಾಗುವುದು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಚಿಕ್ಕಬಳ್ಳಾಪುರ ಪೂರ್ಣ ಜಿಲ್ಲೆಗೆ ನೀತಿಸಂಹಿತೆ ಜಾರಿಯಾಗಿದೆ. ಹೊಸಕೋಟೆಯಲ್ಲಿ ಚುನಾವಣೆ ನಡೆಯಲಿದ್ದು, ಸಂಪೂರ್ಣ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೀತಿಸಂಹಿತೆ ಜಾರಿಯಾಗಿದೆ. ಕೆಆರ್ ಪೇಟೆ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಸಂಪೂರ್ಣ ಮಂಡ್ಯ ಜಿಲ್ಲೆಗೆ ನೀತಿಸಂಹಿತೆ ಜಾರಿಯಾಗಲಿದೆ.
ಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು, ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ಚಟುವಟಿಕೆ ಆರಂಭಿಸಿವೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಭೆಗಳನ್ನು ನಡೆಸುತ್ತಿವೆ. ಕಾಂಗ್ರೆಸ್ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನುಳಿದ ಕ್ಷೇತ್ರಗಳ ಆಯ್ಕೆ ಕಗ್ಗಂಟಾಗಿದೆ.
ಅನರ್ಹ ಶಾಸಕರ ಕುರಿತು ಸುಪ್ರಿಂ ಕೋರ್ಟ್ ತೀರ್ಪು ನೀಡದಿರುವುದರಿಂದ ಅವರ ಸ್ಪರ್ಧೆ ಅನಿಶ್ಚಿತವಾಗಿದೆ. ಜೊತೆಗೆ ಬಿಜೆಪಿ ಕೂಡ ಕೋರ್ಟ್ ತೀರ್ಪು ಬಂದ ನಂತರವೇ ಅಭ್ಯರ್ಥಿಗಳ ಕುರಿತು ನಿರ್ಧರಿಸಲಿದೆ. ಬುಧವಾರ ಕೋರ್ಟ್ ತೀರ್ಪು ನೀಡುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ