*ಉಪ ಚುನಾವಣೆ ಫಲಿತಾಂಶ ನಾಯಕತ್ವ ಮೇಲೆ ಪರಿಣಾಮ ಬೀರುವುದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
*ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು:
* *ಗ್ಯಾರಂಟಿ ಯೋಜನೆಗಳು ಉಪ ಚುನಾವಣೆಯಲ್ಲಿ ಫಲ ನೀಡಲಿವೆ*
*
ಪ್ರಗತಿವಾಹಿನಿ ಸುದ್ದಿ, *ಕಲ್ಯಾಣ (ಶಿಗ್ಗಾವಿ):* ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯ ದಾಖಲಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳು ಉಪ ಚುನಾವಣೆಯಲ್ಲಿ ಫಲ ನೀಡಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರದ ವೇಳೆ ಕಲ್ಯಾಣ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವು ಶತಸಿದ್ಧ ಎಂದರು.
* *ನಾಯಕತ್ವದ ಮೇಲೆ ಪರಿಣಾಮ ಬೀರಲ್ಲ*
ಉಪ ಚುನಾವಣೆಯ ಫಲಿತಾಂಶ ರಾಜ್ಯ ನಾಯಕತ್ವ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
* *ಕೋವಿಡ್ ಕಾಲದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ*
ಕೋವಿಡ್ ಕಾಲದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದ್ದು, ಇದರ ಬಗ್ಗೆ ಸತ್ಯಾಂಶ ಏನು ಅನ್ನೋದು ಜನರಿಗೆ ಗೊತ್ತಿದೆ. ಕೋವಿಡ್ ಹಗರಣದ ಬಗ್ಗೆ ಜನ ಸಾಮಾನ್ಯರಿಗೂ ಗೊತ್ತಿದೆ. ಸರ್ಕಾರ ಈಗಾಗಲೇ ದಾಖಲೆಗಳನ್ನು ಬಿಡುಗಡೆ ಮಾಡಿದೆ ಎಂದರು.
ಕೋವಿಡ್ ಹಗರಣ ಅಗಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದಾರೆ. ಹತ್ತು ಸಾವಿರ ಕೋಟಿ ಹಗರಣ ಆಗಿದೆ ಎಂದು ಯತ್ನಾಳ್ ಆರೋಪಿಸಿದ್ದರು. ಈಗ ಮುಂದುವರೆದ ಭಾಗ ಈ ತನಿಖೆ ಅಷ್ಟೆ ಎಂದು ಹೇಳಿದರು.
* *ಗೃಹಲಕ್ಷ್ಮೀ ಬಗ್ಗೆ ಮಹಿಳೆಯರಿಂದ ಧನ್ಯತಾಭಾವ*
ಪಂಚ ಗ್ಯಾರಂಟಿ ಯೋಜನೆಗಳಿಂದ ಉಪ ಚುನಾವಣೆಗೆ ಅನುಕೂಲ ಆಗಲಿದ್ದು, ನಾನು ಹೋದ ಕಡೆಯಲ್ಲೆಲ್ಲಾ ಮಹಿಳೆಯರು ಧನ್ಯತಾಭಾವ ತೋರುತ್ತಿದ್ದಾರೆ ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆಯಲ್ಲಿ 1 ಕೋಟಿ 28 ಲಕ್ಷ ಜನ ಅರ್ಹರಿದ್ದು, ನೊಂದಣಿ ಮಾಡಿಕೊಂಡಿರುವ 1 ಕೋಟಿ 25 ಲಕ್ಷ ಮಹಿಳೆಯರಿಗೆ ಹಣ ತಲುಪುತ್ತಿದೆ. ಸುಮಾರು 82 ಸಾವಿರ ಮಹಿಳೆಯರಿಗೆ ವಿವಿಧ ಕಾರಣಗಳಿಂದ ಹಣ ಹೋಗಿಲ್ಲ. ಅದರಲ್ಲಿ ನಮ್ಮ ತಪ್ಪಿಲ್ಲ. ಇಂತಹ ಪ್ರಕರಣಗಳಿಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಈಗಾಗಲೇ ಹಿಂಬರಹ ಬರೆದುಕೊಡಲಾಗಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ