Kannada NewsKarnataka NewsLatest

*ನನ್ನನ್ನು ಕೆಣಕಿದ್ದೀರಿ, ಪರಿಣಾಮ ಮುಂದೆ ಕಾದು ನೋಡಿ… ಜೆಡಿಎಸ್ ನಾಯಕರಿಗೆ ಇಬ್ರಾಹಿಂ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ.ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡಿರುವ ಹಿನ್ನೆಲೆಯಲ್ಲಿ ದಳಪತಿಗಳ ವಿರುದ್ಧ ಕಿಡಿ ಕಾರಿರುವ ಸಿ.ಎಂ.ಇಬ್ರಾಹಿಂ, ನನ್ನನ್ನು ತೆಗೆಯುವ ಅಧಿಕಾರ ನಿಮಗಿಲ್ಲ, ಮೊದಲು ನೋಟೀಸ್ ನೀಡಬೇಕಿತ್ತು. ನೋಟೀಸ್ ನೀಡದೇ ಏಕಾಏಕಿ ತೆಗೆದು ಹಾಕಿದ್ದು ಸರಿಯಲ್ಲ ಎಂದು ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ.ಇಬ್ರಾಹಿಂ, ನನ್ನನ್ನು ಕೆಣಕಿದ್ದೀರಿ. ಇದರ ಪರಿಣಾಮ ಮುಂದೆ ಕಾದು ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ನಾನು ಚುನಾವಣಾ ಆಯೋಗದಲ್ಲಿ ಇದನ್ನು ಪ್ರಶ್ನೆ ಮಾಡುತ್ತೇನೆ. ದೇವೇಗೌಡರಿಗೆ ಪುತ್ರ ವ್ಯಾಮೋಹ ಎಂಬುದು ಸಾಬೀತಾಗಿದೆ. ಸ್ವಲ್ಪನಾದರೂ ಪ್ರಜ್ಞೆ ಬೇಡವೇ? ಇಂದಿನವರೆಗೂ ದೇವೆಗೌಡರನ್ನು ನನ್ನ ತಂದೆ ಸಮಾನ ಎಂದುಕೊಂಡಿದ್ದೆ. ನನ್ನ ಪರಿಷತ್ ಸ್ಥಾನವನ್ನು ಬಿಟ್ಟು ನಿಮ್ಮ ಬಳಿ ಬಂದೆ. ರಾತ್ರಿ ಹಗಲು ನಿಮ್ಮ ಮಕ್ಕಳ ಗೆಲುವಿಗಾಗಿ ಶ್ರಮಿಸಿದೆ. ನನ್ನ ಜೊತೆ ಒಂದು ಮಾತನಾಡಬೇಕು ಅಂತಾ ಅನಿಸಲೇ ಇಲ್ವಾ? ಒಳ್ಳೆ ಬಹುಮಾನ ಕೊಟ್ಟಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.

ಮಹಾಭಾರತದಲ್ಲಿ ಆದ ಹಾಗೆ ರಾಜ್ಯದಲ್ಲಿ ಜನತಾದಳಕ್ಕೂ ಆಗುತ್ತೆ. ಇಂದಿನ ಸಭೆ ಬಗ್ಗೆ ನನಗೆ ಗೊತ್ತೂ ಇರಲಿಲ್ಲ. ಕಂಡೋರ ಮಕ್ಕಳಿಗೆ ಹೀಗೆಲ್ಲ ಮಾಡುವುದು ಸರಿಯಲ್ಲ ಗೌಡ್ರೇ. ನನಗೆ ಅಧಿಕಾರದ ಆಸೆ ಇಲ್ಲ. ಆದರೆ ಜೆಡಿಎಸ್ ಕುಟುಂಬದ ಸ್ವತ್ತು ಎಂಬುದನ್ನು ತೋರಿಸಿಬಿಟ್ಟಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button