Kannada NewsKarnataka NewsNationalPolitics

*ಉಪರಾಷ್ಟ್ರಪತಿ ಚಿನಾವಣೆಯಲ್ಲಿ ಸಿ.ಪಿ.ರಾಧಾಕೃಷ್ಣನ್‌ ಗೆಲುವಿನ ನಗೆ: ವಿಪಕ್ಷ ಸದಸ್ಯರ ಸೆಳೆಯುವಲ್ಲಿ ಜೋಶಿ ಸಾರಥ್ಯ ಸಫಲ*

ಪ್ರಗತಿವಾಹಿನಿ ಸುದ್ದಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ NDA ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್‌ 452 ಮತಗಳನ್ನು ಪಡೆದು ಭಾರೀ ಬಹುಮತದೊಂದಿಗೆ ಜಯಶಾಲಿಯಾಗಿದ್ದು, ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ಪ್ರಲ್ಹಾದ ಜೋಶಿ ಅವರ ಸಾರಥ್ಯದಲ್ಲಿ ನಡೆಸಿದ ಪೂರ್ವ ಸಿದ್ಧತೆ ಫಲಪ್ರದವಾಗಿದೆ.

ಸಂಸತ್‌ ಭವನದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ರಾಧಾಕೃಷ್ಣನ್‌ ಅವರು ನಿರೀಕ್ಷೆಗಿಂತ ಅತಿ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. NDA ನಿರೀಕ್ಷಿಸಿದ್ದಕ್ಕಿಂತ 25 ಹೆಚ್ಚುವರಿ ಮತಗಳನ್ನೇ ಪಡೆದು ನೂತನ ಉಪರಾಷ್ಟ್ರಪತಿಯಾಗಿ ಗೆಲುವಿನ ನಗೆ ಬೀರಿದ್ದಾರೆ.

ಇಂಡಿ ಕೂಟದ ಅಭ್ಯರ್ಥಿ ಸುದರ್ಶನ ರೆಡ್ಡಿ ಅವರು 300 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಸಂಸತ್ತಿನ ಎರಡೂ ಸದನದ ಸದಸ್ಯರು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನಗೈದಿದ್ದು, NDA ಅಭ್ಯರ್ಥಿ ಆಗಿದ್ದ ರಾಧಾಕೃಷ್ಣನ್‌ ಅವರು ಸಚಿವ ಪ್ರಲ್ಹಾದ ಜೋಶಿ ಮತ್ತಿತರ ಪ್ರಮುಖ ಸಚಿವರ ಬೆಂಬಲದಲ್ಲಿ ವಿಪಕ್ಷಗಳ ಸದಸ್ಯರನ್ನೂ ಸೆಳೆಯುವಲ್ಲಿ ಸಫಲರಾಗಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಸಿ.ಪಿ.ರಾಧಾಕೃಷ್ಣನ್ ಅವರು ಇಂಡಿ ಕೂಟದಿಂದ ಸ್ಪರ್ಧಿಸಿದ್ದ ಸುಪ್ರೀಂಕೋರ್ಟ್‌ ಮಾಜಿ ನ್ಯಾಯಾಧೀಶರಾದ ಸುದರ್ಶನ ರೆಡ್ಡಿ ಅವರ ವಿರುದ್ಧ ಅತಿ ಹೆಚ್ಚಿನ ಮತಗಳ ಅಂತರದಲ್ಲಿ ನಿರೀಕ್ಷಿತ ಗೆಲುವು ಸಾಧಿಸಿರುವುದು NDA ಪಾಳೆಯದಲ್ಲಿ ಸಂತಸ ಮೂಡಿಸಿದೆ. 

Home add -Advt

ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲು ಮತ ಚಲಾಯಿಸಿದರು. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಪ್ರಲ್ಹಾದ ಜೋಶಿ, ಕಿರಣ್​ ರಿಜಿಜು, ಅರ್ಜುನ್​ ರಾಮ್​ ಮೇಘವಾಲ್​​, ಜಿತೇಂದ್ರ ಸಿಂಗ್​ ಮತ್ತು ಎಲ್​.ಮುರುಗನ್​ ಕೂಡ ಮತ ಚಲಾಯಿಸಿದರು. ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಹ ರಾಧಾಕೃಷ್ಣನ್‌ ಅವರನ್ನು ಬೆಂಬಲಿಸಿ ಮತದಾನಗೈದರು.

ಪ್ರಲ್ಹಾದ ಜೋಶಿ ಗೃಹಕಚೇರಿ NDA ಆಗಿತ್ತು ʼಶಕ್ತಿಕೇಂದ್ರʼ

ಸಂವಿಧಾನಿಕ ಹುದ್ದೆಗೆ NDA ಅಭ್ಯರ್ಥಿ ಆಯ್ಕೆಗೆ ಹೆಚ್ಚಿನ ಹೊಣೆಗಾರಿಕೆ ಸಚಿವ ಪ್ರಲ್ಹಾದ ಜೋಶಿ ಅವರ ಹೇಗಲೇರಿತ್ತು. ಹೀಗಾಗಿ ಚುನಾವಣೆ ದಿನಾಂಕ ನಿಗದಿಯಾದ ದಿನದಿಂದಲೂ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಗೃಹಕಚೇರಿ ಶಕ್ತಿಕೇಂದ್ರವಾಗಿ ಮಾರ್ಪಟ್ಟಿತ್ತು.

ಉಪರಾಷ್ಟ್ರಪತಿ ಹುದ್ದೆಗೆ ಸರಳ ವ್ಯಕ್ತಿತ್ವದ ಮಾಹಾರಾಷ್ಟ್ರ ರಾಜ್ಯಪಾಲ ರಾಧಾಕೃಷ್ಣನ್‌ ಹೆಸರನ್ನು ಅಂತಿಮಗೊಳಿಸುತ್ತಲೇ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಲ್ಲಿ ಸಂಚಲನ ಉಂಟುಮಾಡಿತ್ತು. NDA ಮೈತ್ರಿಕೂಟದಲ್ಲಿ ʼಗೆಲುವು ನಮ್ಮದೇʼ ಎನ್ನುವಂತೆ ಸಂತಸ ಮನೆಮಾಡಿತ್ತು. ಅಂತೆಯೇ ಇಂದು ನಿರೀಕ್ಷೆಯಂತೆ ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್‌ ಅವರ ಆಯ್ಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಸ ಹಂಚಿಕೊಂಡಿದ್ದಾರೆ. ಫಲಿತಾಂಶ ಘೋಷಣೆಯಾಗುತ್ತಲೇ ಸಂಸದರೆಲ್ಲ ರಾಧಾಕೃಷ್ಣನ್‌ ಅವರ ಕೈ ಕುಲುಕಿ ಅಭಿನಂದನೆ ಸಲ್ಲಿಸಿದರು.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ರಾಧಾಕೃಷ್ಣನ್‌ ಅವರನ್ನು ಹೆಚ್ಚಿನ ಮತಗಳೊಂದಿಗೆ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ NDA ಪ್ರಮುಖರು ಅದಕ್ಕೆ ತಕ್ಕಂತೆ ಪೂರ್ವ ಸಿದ್ಧತೆ ನಡೆಸಿ, ಹಿಂದಿನ ಅವಧಿಯಲ್ಲಿ ಸಂಸದೀಯ ವ್ಯವಹಾರಗಳ ಖಾತೆ ನಿರ್ವಹಿಸಿದ್ದ ಸಚಿವ ಪ್ರಲ್ಹಾದ ಜೋಶಿ ಅವರ ಹೆಗಲಿಗೆ ತುಸು ಹೆಚ್ಚಿನ ಜವಾಬ್ದಾರಿ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೀಗೆ ಬಿಜೆಪಿ ಮತ್ತು ಮಿತ್ರಪಕ್ಷಗಳ ಪ್ರಮುಖರೊಂದಿಗೆ ಸಚಿವ ಪ್ರಲ್ಹಾದ ಜೋಶಿ ಅನ್ಯೋನ್ಯತೆ ಹೊಂದಿದ್ದರಿಂದ ಅವರ ನೇತೃತ್ವದಲ್ಲೇ ಸಭೆ, ಚರ್ಚೆಗಳನ್ನು ನಡೆಸಲಾಗುತ್ತಿತ್ತು. ರಾಧಾಕೃಷ್ಣನ್‌ ಅವರು ನಾಮಪತ್ರ ಸಲ್ಲಿಕೆ ವೇಳೆ ಪ್ರಲ್ಹಾದ ಜೋಶಿ ಅವರ ಗೃಹದಲ್ಲೇ ತಂಗಿ, ಸರ್ವ ಸಂಸದರ ಬೆಂಬಲ ಕೋರಿದ್ದರು.

Related Articles

Back to top button