Latest

ಸರ್ಕಾರದ ವಿರುದ್ಧ ಬಹಿರಂಗವಾಗಿ ಸಿಡಿದೆದ್ದ ಸಿ.ಪಿ.ಯೋಗೇಶ್ವರ್

ಪ್ರಗತಿವಾಹಿನಿ ಸುದ್ದಿ; ಮೈಸೂರು: ನಾಯಕತ್ವ ಬದಲಾವಣೆಗೆ ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಾ, ಹೇಳಿಕೆಗಳನ್ನು ನೀಡುತ್ತಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್, ಇದೀಗ ಬಹಿರಂಗವಾಗಿ ಸಿಡಿದೆದ್ದಿದ್ದು, ಸಿಎಂ ಎಂದರೆ ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವ ಹುದ್ದೆ. ಬದಲಾವಣೆ ಜಗದ ನಿಯಮ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಚರ್ಚಿಸಿದ ಬಳಿಕ ಮಾತನಾಡಿದ ಸಿ.ಪಿ.ಯೋಗೇಶ್ವರ್, ಬಿಜೆಪಿ ಸರ್ಕಾರ ಬರಲು ನಾವು ಬಹಳಷ್ಟು ಶ್ರಮಿಸಿದ್ದೇವೆ. ಸಿಎಂ ಎಂದರೆ ವೈಭವಕ್ಕಾಗಿ ಆಗುವುದಲ್ಲ, ಬಹಳ ಸಂವೇದನಾಶೀಲರಾಗಿರಬೇಕು. ಜನರ ಸಮಸ್ಯೆ ಪರಿಹರಿಸಿ, ಆಶೋತ್ತರಗಳನ್ನು ಈಡೇರಿಸುವ ಹುದ್ದೆ. ಅಂಬಾರಿ ಹೋರಬೇಕು ಎಂದರೆ ಯಾವ ಆನೆ ಸೂಕ್ತ ಎಂಬುದು ಮುಖ್ಯ ಎಂದು ಪರೋಕ್ಷವಾಗಿ ಆನೆ ಹಾಗೂ ಅಂಬಾರಿಗೆ ಹೋಲಿಸಿದ್ದಾರೆ.

ಅಂಬಾರಿ ಹೊರಿಸುವಾಗ ಭಾರ ಹೋರಲು ಸಾಧ್ಯವೇ? ಯಾವ ಆನೆ ಸೂಕ್ತ ಎಂಬುದನ್ನು ನೋಡಿ ಬದಲಾವಣೆ ಮಾಡುತ್ತೇವೆ. ಹಾಗೇ ಬದಲಾವಣೆ ಎಂಬುದು ಜಗದ ನಿಯಮ. ಅರ್ಜುನ ಆನೆಯೂ ಒಂದಷ್ಟು ವರ್ಷ ಅಂಬಾರಿ ಹೊತ್ತ, ಅಭಿಮನ್ಯುವೂ ಹೊತ್ತ, ಬಲರಾಮನೂ ಹೊತ್ತ. ಹಾಗಂತ ಮರಿ ಆನೆಗೂ ಅಂಬಾರಿ ಹೊರಿಸಲಾಗದು. ಅಪ್ಪ ಅಂಬಾರಿ ಹೊತ್ತ ಎಂದು ಮರಿಯಾನೆಗೂ ಕೊಡಲಾಗದು. ಬಲಾವಣೆ ಪ್ರಕೃತಿ ಸಹಜವಾದದ್ದು, ಹೀಗಾಗಿ ಮುಂದಿನ ದಿನಗಳಲ್ಲಿ ಕಾದುನೋಡೋಣ ಎಂದು ಹೇಳುವ ಮೂಲಕ ಬಿ.ವೈ.ವಿಜಯೇಂದ್ರಗೂ ಟಾಂಗ್ ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಕ್ಕೂ ಮುನ್ನ 17 ಶಾಸಕರು ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಬಳಿಕ ಬಾಂಬೆಗೆ ಹಾರಿದ್ದರು. ಅಂತೆಯೇ ಇದೀಗ ಸಿ.ಪಿ.ಯೋಗೇಶ್ವರ್ ಶ್ರೀನಿವಾಸ್ ಪ್ರಸಾದ್ ಭೇಟಿ ಬಳಿಕ ಹೊಸ ಬಾಂಬ್ ಸಿಡಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸೇನಾ ವಿಮಾನ ಪತನ; 17 ಯೋಧರ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button