ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ‘ರಾಹುಲ್ ಗಾಂಧಿಯನ್ನು ಕಂಡರೆ ಬಿಜೆಪಿಗೆ ಭಯ’ ಎಂಬ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ವತ: ಖರ್ಗೆಯವರೇ ಚುನಾವಣೆ ಗೆಲ್ಲಲಿಲ್ಲ. ಅವರ ನಾಯಕತ್ವದಲ್ಲಿ ಎಷ್ಟು ಎಲೆಕ್ಷನ್ ಗೆದ್ದಿದ್ದಾರೆ ಎಂದು ಬಿಜೆಪಿ ಭಯಪಡಬೇಕು ಎಂದು ಕೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ರಾಹುಲ್ ಗಾಂಧಿ ಮಹಾನಾಯಕರಾಗುತ್ತಾರೆ. ಅವರನ್ನು ಕಂಡರೆ ಬಿಜೆಪಿಗೆ ಭಯ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನಾಯಕರು, ಲೀಡರ್ ಗಳೆಂದು ಒಪ್ಪಿಕೊಳ್ಳುತ್ತೇನೆ. ಆದರೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಇವರನ್ನು ಲೀಡರ್ ಗಳೆಂದು ಹೇಳಲು ಆಗಲ್ಲ. ಕಾಂಗ್ರೆಸ್ ಪಕ್ಷಕ್ಕೆ ತಾತ್ವಿಕ ತಳಹದಿಯೂ ಇಲ್ಲ, ರಾಷ್ಟ್ರೀಯ ನಾಯಕತ್ವವೂ ಇಲ್ಲ ಎಂದು ವ್ಯಂಗ್ಯವಾಡಿದರು.
ರಾಹುಲ್ ನೇತೃತ್ವದಲ್ಲಿ ಎಷ್ಟು ಚುನಾವಣೆ ಗೆದ್ದಿದ್ದಾರೆ. ರಾಹುಲ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ 1 ಕ್ಷೇತ್ರವನ್ನು ಕಾಂಗ್ರೆಸ್ ನವರು ಗೆದ್ದರು. ನಾವು ಬಲಿಷ್ಠ ಅಭ್ಯರ್ಥಿಯನ್ನು ನಿಲ್ಲಿಸಿ ಪ್ರಚಾರ ನಡೆಸಿದ್ದರೆ ಅಲ್ಲಿಯೂ ನಾವೇ ಗೆಲ್ಲುತ್ತಿದ್ದೆವು ಎಂದರು.
ಇದೇ ವೇಳೆ ಲಾಕ್ ಡೌನ್ ಮಾಡಿದರೆ ಪ್ರತಿ ಕುಟುಂಬಕ್ಕೆ 10,000 ರೂಪಾಯಿ ನೀಡಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ ಸಿ.ಟಿ.ರವಿ, ವಿಜಯನಗರ ಅರಸರಂತೆ ಶ್ರೀಮಂತಿಕೆ ತುಂಬಿ ಹೋಗಿದ್ದರೆ ಅವರು ಹಾಗೆ ಹೇಳಬಹುದಿತ್ತು. ಆದರೆ ಮಾಜಿ ಸಿಎಂ ಖಜಾನೆ ಖಾಲಿ ಮಾಡಿ, ಹೆಚ್ಚುವರಿ ಸಾಲ ಮಾಡಿ ಹೋಗಿದ್ದಾರೆ. ತಮ್ಮ ಮನೆ, ಪಕ್ಷದ ಖಜಾನೆ ತುಂಬಿಕೊಂಡು ರಾಜ್ಯದ ಖಜಾನೆ ಖಾಲಿ ಮಾಡಿ ಹೋಗಿದ್ದಾರೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ