Kannada NewsKarnataka NewsLatest

ಹಲವು ಯೋಜನೆಗಳಿಗೆ ಸಚಿವಸಂಪುಟ ಅನುಮೋದನೆ: ಇಲ್ಲಿದೆ ವಿವರ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಸಚಿವ ಸಂಪುಟ ಸಭೆ ಬಳಿಕ ಕಾನೂನು ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್‌  ಅವರ ಸುದ್ದಿಗೋಷ್ಟಿಯ ಅಂಶಗಳು –

• ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ʻಹೊಂಬೆಳಕುʼ ಯೋಜನೆಯಡಿ ಸೋಲಾರ್‌ ಬೀದಿ ದೀಪಗಳನ್ನು ಅಳವಡಿಸಲು, ರೂ.25 ಕೋಟಿ ಅನುದಾನಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿದೆ.

• ಬೆಂಗಳೂರು ನಗರದಲ್ಲಿ  250 ಮೀಟರ್‌ ಎತ್ತರದ ಆಕಾಶ ಗೋಪುರ (ಸ್ಕೈಡೆಕ್) ನಿರ್ಮಿಸಲು‌ ತಾಂತ್ರಿಕ ಅನುಮೋದನೆ ನೀಡಿದೆ.

• ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂಧನ ವೆಚ್ಚ ಉಳಿತಾಯವಾಗುವ ಮೊತ್ತದಲ್ಲಿ, ಸಾಂಪ್ರದಾಯಿಕ ವಿದ್ಯುತ್‌ ಬೀದಿ ದೀಪಗಳನ್ನು ತೆರವುಗೊಳಿಸಿ ಎಲ್.ಇ.ಡಿ ಬೀದಿ ದೀಪಗಳನ್ನು ಇ.ಎಂ.ಐ/ವಾರ್ಷಿಕ ಪಾವತಿ ಯೋಜನೆಯಡಿ ಮುಂದಿನ 7 ವರ್ಷಗಳ ಅವಧಿಗೆ ಜಾರಿಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

• ಹೆಬ್ಬಾಳ ಮೇಲು ಸೇತುವೆ ಎಸ್ಟೀಮ್‌ ಮಾಲ್‌ ಹತ್ತಿರದಿಂದ ಹೊಸೂರು ರಸ್ತೆಯ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನ ಮೇಲ್ಸೇತುವೆ ತನಕ  12690 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಭೂಗತ ವಾಹನ ಸುರಂಗ ಮಾರ್ಗವನ್ನು ಟ್ವಿನ್ ‌ ಟ್ಯೂಬ್‌ ಮಾದರಿಯಲ್ಲಿ ನಿರ್ಮಿಸಲು ಸಚಿವ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ.

• ಬಿಬಿಎಂಪಿ ವ್ಯಾಪ್ತಿಯಲ್ಲಿ 52 ಇಂದಿರಾ ಕ್ಯಾಂಟೀನ್‌ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಇದಕ್ಕೆ ತಗಲುವ ರೂ.20 ಕೋಟಿ ಅನುದಾನ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. 

• ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಟಿಡಿಆರ್‌ ಯೋಜನೆಯಡಿ ಸ್ವಾಧೀನಪಡಿಸುವ ಪ್ರಕ್ರಿಯೆಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಸೂಚನೆಯನ್ವಯ ಸಾರ್ವಜನಿಕರಿಗೆ  ಭೂಪರಿಹಾರ ನೀಡಲು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲು ನಿರ್ಧರಿಸಲಾಗಿದೆ.

• ಆಯವ್ಯಯದಲ್ಲಿ ಘೋಷಿಸಿರುವಂತೆ 85ಕೋಟಿ ರೂ. ಅನುದಾನದಲ್ಲಿ 592ಅಂಗನವಾಡಿಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ.

• ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೊರೇಷನ್‌ ಸಂಸ್ಥೆಯ ಗ್ರೂಪ್‌ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ 4ನೇ ವೇತನ ಆಯೋಗದ ಶಿಫಾರಸ್ಸಿನ ಅನುಸಾರ ದಿನಾಂಕ 01-04-1998 ರಿಂದ 30-09-2005ರ ವರೆಗಿನ ವೇತನ ಬಾಕಿ,  ಬಡ್ಡಿ ಇತ್ಯಾದಿಗಳನ್ನು ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ.

• ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸು ಕೇಂದ್ರ ಸರ್ಕಾರದ ಕಾರ್ಯಕ್ರಮವನ್ನು ರಾಜ್ಯದಲ್ಲಿ 147.87 ಕೋಟಿ ರೂ. ಮೊತ್ತದಲ್ಲಿ ಅನುಷ್ಢಾನಗೊಳಿಸಲು ಅನುಮೋದನೆ ನೀಡಲಾಗಿದೆ.

• ಬಳ್ಳಾರಿ  ಸಂಡೂರು ತಾಲೂಕಿನ ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2ಸಾವಿರ ಎಕ್ರೆ ಜಮೀನನ್ನು ಪ್ರತಿ ಎಕರೆಗೆ 1.22 ಲಕ್ಷ ರೂ. ಅಂತಿಮ ಬೆಲೆ ನಿಗದಿಪಡಿಸಿ ಹಾಗೂ ಸಂಡೂರು ತಾಲೂಕಿನ ತೋರಗಣಲ್ಲು, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.73 ಎಕ್ರೆ ಜಮೀನನ್ನು ಪ್ರತಿ ಎಕರೆಗೆ ರೂ. 1.50 ಲಕ್ಷ ಅಂತಿಮ ಬೆಲೆ ನಿಗದಿಪಡಿಸಿ ಜೆ.ಎಸ್.ಡಬ್ಲ್ಯೂ ಸ್ಟೀಲ್‌ ಪರವಾಗಿ ನೀಡಲು ನಿರ್ಧರಿಸಲಾಗಿದೆ. 

• ಕೆ.ಎ.ಎಸ್‌ ಅಧಿಕಾರಿ ರಾಜಮ್ಮ ಎ. ಚೌಡರೆಡ್ಡಿ ಅವರ ವಿರುದ್ಧ ಲೋಕಾಯುಕ್ತ ಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯಲ್ಲಿ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತರ ಶಿಫಾರಸ್ಸಿನಂತೆ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ಅನುಮೋದನೆ ನೀಡಲಾಗಿದೆ.

• ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಹೆಲ್ತ್‌ ಮಿಷನ್‌ ಹಾಗೂ ಆರೋಗ್ಯ ಇಲಾಖೆಯ ಇತರ ಎಲ್ಲಾ ಆರೋಗ್ಯ ಸಂಬಂಧಿತ ಡಿಜಿಟಲ್‌ ಉಪಕ್ರಮಗಳ ಅನುಷ್ಠಾನಕ್ಕಾಗಿ ಕರ್ನಾಟಕ ಡಿಜಿಟಲ್‌ ಹೆಲ್ತ್‌ ಸೊಸೈಟಿ ಸ್ಥಾಪಿಸಿ ನೋಂದಣಿ ಮಾಡಲು ನಿರ್ಧರಿಸಲಾಗಿದೆ.

• ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಕ್ಕಲಪರ್ವಿ ಗ್ರಾಮದ ಹತ್ತಿರ ತುಂಗಾಭದ್ರಾ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್ ರೂ.397.50 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

• ವಿಜಯಪುರ ಜಿಲ್ಲೆ, ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟೆ ಪಟ್ಟಣಕ್ಕೆ ಸಂಪರ್ಕಿಸುವ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ಪುನರ್‌ ನಿರ್ಮಾಣ ಕಾಮಗಾರಿಯನ್ನು ರೂ.28ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

• 2023-24ನೇ ಸಾಲಿನ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಯಡಿ ರೂ.1385.60 ಕೋಟಿ ಮೊತ್ತದ 295 ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button