*ಈಶ್ವರಪ್ಪ, ಜಾರಕಿಹೊಳಿಗೆ ಸಿಎಂ ಹೇಳಿದ್ದೇನು? ಸಚಿವ ಸಂಪುಟ ವಿಸ್ತರಣೆ ಆಗುತ್ತಾ?*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಒಮ್ಮೆ ವರಿಷ್ಠರೊಂದಿಗೆ ಚರ್ಚೆಯಾಗಿದ್ದು, ಶೀಘ್ರದಲ್ಲಿಯೇ ಮತ್ತೊಮ್ಮೆ ದೆಹಲಿಗೆ ತೆರಳಿ ಈ ವಿಚಾರ ಚರ್ಚಿಸುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಾಜಿ ಸಚಿವರಾದ ಈಶ್ವರಪ್ಪಹಾಗೂ ರಮೇಶ ಜಾರಕಿಹೊಳಿಯವರು ನಿನ್ನೆ ಭೇಟಿಯಾಗಿದ್ದು, ತಮ್ಮನ್ನು ಸಚಿವ ಸಂಪುಟದಲ್ಲಿ ವಿಸ್ತರಿಸುವ ಬಗ್ಗೆ ಕೇಳಿದ್ದರು. ನಾನು ನವದೆಹಲಿಗೆ ಹೋದಾಗ ಈ ಬಗ್ಗೆ ಮಾಡಿರುವ ಚರ್ಚೆಯ ವಿವರಗಳನ್ನು ಅವರಿಗೆ ನೀಡಿದ್ದೇನೆ. ಇಷ್ಟರಲ್ಲಿಯೇ ಮತ್ತೊಮ್ಮೆ ನವದೆಹಲಿಗೆ ಭೇಟಿ ನೀಡಿ ಈ ವಿಚಾರ ಹಾಗೂ ಇನ್ನಿತರ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ಸಚಿವ ಸಂಪುಟ ವಿಸ್ತರಣೆ, ಅದರ ಅಗತ್ಯತೆಗಳ ಬಗ್ಗೆ ವಿವರಿಸಲಾಗಿದೆ. ಈ ಬಾರಿ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನವನ್ನು ನೀಡಲಿದೆ ಎಂಬ ವಿಶ್ವಾಸವಿದೆ ಎಂದರು.
ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ತನ್ನ ನಿಲುವನ್ನು ಗಟ್ಟಿಯಾಗಿ ಮಂಡಿಸಲಿದೆ:
ಮಹಾರಾಷ್ಟ್ರದಿಂದ ನೀರು ಬಿಡುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂಬ ಮಹಾರಾಷ್ಟ್ರ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ಹೇಳಿಕೆಯನ್ನು ವಿಪಕ್ಷ ಸದಸ್ಯರು ಹೇಳಿದ್ದು, ಎಲ್ಲ ನದಿಗಳು ಮೂರ್ನಾಲ್ಕು ರಾಜ್ಯಗಳಲ್ಲಿ ಹರಿಯುತ್ತಿದೆ. ಅಂತರರಾಜ್ಯ ನದಿಗಳು ಅಂತರರಾಜ್ಯ ಜಲ ವಿವಾದ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ರಾಜ್ಯಗಳ ನಡುವೆ ನಿಲುವುಗಳಲ್ಲಿ ವ್ಯತ್ಯಾಸವಿದ್ದರೂ, ಇಂತಹ ಹೇಳಿಕೆಗಳನ್ನು ನೀಡಬಾರದು. ಇಂತಹ ಉದ್ಘಟತನದ ಮಾತುಗಳಿಂದ ಏನೂ ಪ್ರಯೋಜನವಿಲ್ಲ. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ಕಾರ್ಯಗತ ಮಾಡುವುದು ಸಾಧ್ಯವಿಲ್ಲ. ರಾಜ್ಯಗಳ ನಡುವೆ ಪರಸ್ಪರ ಸಂಬಂಧವಿದ್ದೇ ಇರುತ್ತದೆ. ಈಗಾಗಲೇ ಗಡಿ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಅಲ್ಲಿ ಅವರು ಹೋರಾಡಲಿ. ಸಂವಿಧಾನ ಪ್ರಕಾರ ರಾಜ್ಯ ನಿಲುವು ಸರಿಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕದ ವಾದವನ್ನು ಗಟ್ಟಿಯಾಗಿ ಮಂಡಿಸಲಾಗುವುದು ಎಂದರು.
ಸಂಜಯ್ ರಾವತ್ ಅವರು ಚೀನಾ ಸೇನೆ ಭಾರತಕ್ಕೆ ನುಗ್ಗಿದಂತೆ, ಬೆಳಗಾವಿಗೆ ನುಗ್ಗುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಂಜಯ್ ರಾವತ್ ಅವರ ಪ್ರಾಮುಖ್ಯತೆ ಏನು ಎಂದು ಎಲ್ಲರಿಗೂ ತಿಳಿದಿದೆ. ಅವರು ಸದಾ ಪ್ರಚೋದನಕಾರಿ ಹೇಳಿಕೆಗಳನ್ನೇ ನೀಡುತ್ತಾರೆ. ಅವರು ಚೈನಾದಂತೆ ಬಂದರೆ ಕನ್ನಡಿಗರು ಭಾರತೀಯ ಸೈನ್ಯದಂತೆ ಅವರನ್ನು ಹಿಮ್ಮೆಟ್ಟಿಸುತ್ತೇವೆ ಎಂದರು.
*ಅವಧಿ ಮುನ್ನ ಚುನಾವಣೆ ವಿಚಾರ; ಸಿಎಂ ಬೊಮ್ಮಾಯಿ ಸ್ಪಷ್ಟನೆ*
https://pragati.taskdun.com/vidhanasabha-electiond-k-shivakumarcm-basavara-bommaiclarification/