Kannada NewsLatest

ರೈತರ-ಅಧಿಕಾರಿಗಳ ಸಭೆ ಕರೆಯಲು ಡಿಸಿಗೆ ಒತ್ತಾಯ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ ಮಳೆಯಾಗದಿರುವುದರಿಂದ ರೈತರು ಬಿತ್ತನೆ ಆರಂಭಿಸಿಲ್ಲ. ಈಗಾಗಲೇ ಜಿಲ್ಲೆಯಾದ್ಯಂತ ಭೀಕರ ಬರಗಾಲ  ಆವರಿಸಿದೆ.  ಜಲಕ್ಷಾಮ, ಜಾನುವಾರುಗಳಿಗೆ ಮೇವಿನ ಕೊರತೆ, ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಸೇರಿದಂತೆ ಬರಗಾಲದ ಎಲ್ಲ ಭೀಕರತೆಗಳು ಎದುರಾಗುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಬರಗಾಲ ಹಾಗೂ ಇನ್ನಿತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ತಕ್ಷಣ ರೈತರ ಹಾಗೂ ಅಧಿಕಾರಿಗಳ ಸಭೆ ಕರೆಯುವಂತೆ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಬರಗಾಲವನ್ನು ಸಮರ್ಥವಾಗಿ ಎದುರಿಸಲು  ಜಿಲ್ಲೆಯ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಾಗಿರುವ ಕೃಷ್ಣ, ಮಹಾದಾಯಿ, ಕಳಸಾ-ಬಂಡೂರಿ ಮುಂತಾದ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಸಬೇಕಾಗಿದೆ. ಬರಗಾಲ ಎದುರಿಸಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಆಗಬೇಕಾಗಿರುವುದರಿಂದ ರೈತರ ಮತ್ತು ಅಧಿಕಾರಿಗಳ ಸಭೆ ಕರೆಯುವುದು ಅಗತ್ಯವಾಗಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ವಿವರಿಸಿದ್ದಾರೆ.

ಸ್ಥಳೀಯ ಸಮಸ್ಯೆಗಳ ಜೊತೆಗೆ ರಾಜ್ಯದ ಪ್ರಸಕ್ತ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಬೇಕಾಗಿದೆ. ರಾಜ್ಯ ಸರಕಾರ ಘೋಷಣೆ ಮಾಡಿರುವ ಸಾಲ ಮನ್ನಾ ಯೋಜನೆಯ ಋಣ ಮುಕ್ತ ಪತ್ರ ವಿತರಣೆಯಲ್ಲಿ ಈ ಭಾಗದ ಬಗ್ಗೆ ಮುಖ್ಯಮಂತ್ರಿಗಳ ನಿರ್ಲಕ್ಷ,  ತರಾತುರಿಯಲ್ಲಿ ಜಾರಿಗೆ ತರಲು ಯತ್ನಿಸುತ್ತಿರುವ  ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ನ್ಯಾಯ ಸಮ್ಮತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ತಿದ್ದುಪಡಿ ವಿಧೇಯಕ 2019 ರೈತ ವಿರೋಧಿಯಾಗಿದೆ. ಈ ವಿಧೇಯಕದ ಬಗ್ಗೆಯೂ ಚರ್ಚೆಯ ಅಗತ್ಯವಿದೆ.

ಈ ಎಲ್ಲ ವಿಷಯಗಳ ಬಗ್ಗೆ ಕುಲಂಕಷವಾಗಿ ಚರ್ಚಿಸಲು ತಮ್ಮ ಅಧ್ಯಕ್ಷತೆಯಲ್ಲಿ ತಕ್ಷಣ ರೈತರ ಹಾಗೂ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button