Kannada NewsKarnataka News

ಚುನಾವಣೆ ಬಂದಾಗ ನಿಮ್ಮನ್ನು ಸುತ್ತುವರಿಯುವ ಅಭ್ಯರ್ಥಿಗಳು ಆಮೇಲೆ ಕಾಣೆಯಾಗಿಬಿಡುತ್ತಾರೆ. ಅಂತಹವರನ್ನು ದೂರವಿಡಿ -ಲಖನ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅಭಿವೃದ್ಧಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ವಿಧಾನ ಪರಿಷತ್ತಿನ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.

ಬುಧವಾರ ಸುಳೇಭಾವಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ  ಪ್ರಚಾರ ನಡೆಸಿದ ಅವರು, ವಿರೋಧಿಗಳ ಯಾವುದೇ ಆಸೆ ಆಮೀಷಗಳಿಗೆ ಬಲಿಯಾಗಬೇಡಿ ಎಂದು ಹೇಳಿದರು.

 ಸುಳೇಭಾವಿ ಜಿಪಂ ವ್ಯಾಪ್ತಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಮತಯಾಚಿಸಿದರು.

ಚುನಾವಣೆ ಬಂದ ಮೇಲೆ ನಿಮ್ಮನ್ನು ಸುತ್ತುವರಿಯುವ ಅಭ್ಯರ್ಥಿಗಳು ಆಮೇಲೆ ಒಮ್ಮೆಲೆ ಕಾಣೆಯಾಗಿಬಿಡುತ್ತಾರೆ. ಅಂತಹವರನ್ನು ದೂರವಿಡಿ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

೨೦ ವರ್ಷಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದೇನೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ಸದಾ ಋಣಿಯಾಗಿರುವೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ಥಳೀಯ ಸಂಸ್ಥೆಗಳ ಧ್ವನಿಯಾಗಿ ಕೆಲಸ ಮಾಡುವೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡುವುದಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಾ ಅನಗೋಳಕರ, ಜಿಪಂ ಮಾಜಿ ಸದಸ್ಯ ಟಿ.ಆರ್. ಕಾಗಲ, ಜಿಪಂ ವ್ಯಾಪ್ತಿಯ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಅಭಿದಾಬೇಗಂ ಸನದಿ, ಭಾಗ್ಯಶ್ರೀ ಹಣಬರ, ಅಲ್ಲನ್ನಾ ನಾಯ್ಕ, ನಾಗಪ್ಪ ಕಾಲೇರಿ, ಅಲ್ಲಾವುದ್ದೀನ್ ಫಣಿಬಂಧ, ಬಸವರಾಜ ಮಾದಬನವರ, ಮಹೇಶ ಸೋನೆನ್ನವರ, ರತ್ನವ್ವ ಕೋಲಕಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

ಚುನಾವಣೆಯಲ್ಲಿ ಬಂದು ಹೋಗುವ ವ್ಯಕ್ತಿಗಳನ್ನು ನಂಬಬೇಡಿ

 

ಬೆಳಗಾವಿ : ಚುನಾವಣೆಯಲ್ಲಿ ಬಂದು ಹೋಗುವ ವ್ಯಕ್ತಿಗಳನ್ನು ನಂಬಬೇಡಿ. ಕೇವಲ ಭರವಸೆಗಳನ್ನು ನೀಡುತ್ತಾ ಹೋಗುತ್ತಿರುತ್ತಾರೆ. ಅಂತಹವರಿಂದ ಅಭಿವೃದ್ಧಿ ಸಾಧ್ಯವಿಲ್ಲ. ವಿಧಾನ ಪರಿಷತ್‌ಗೆ ನನ್ನನ್ನು ಚುನಾಯಿಸಿದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿದ್ಧವಿರುವುದಾಗಿ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.
ಬುಧವಾರ ಖಾನಾಪೂರದ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಿಗೆ ಹೆಚ್ಚಿನ ಅಧಿಕಾರ ತರಲು ಸಂಕಲ್ಪ ಮಾಡಿರುವುದಾಗಿ ಹೇಳಿದರು.
ಈ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ಬಂದಿತ್ತಾದರೂ ನಾನು ಪಕ್ಷಾತೀತವಾಗಿ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಸೇವೆ ಮಾಡಲು ಇಚ್ಛಿಸಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಡಿ.೧೦ ರಂದು ನಡೆಯಲಿರುವ ಚುನಾವಣೆಯಲ್ಲಿ ಶೇಜ್ ನಂ. ೫ ರ ನನ್ನ ಭಾವಚಿತ್ರದ ಮುಂದೆ ೧ ಅಂತಾ ಬರೆದು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡುವಂತೆ ಅವರು ಕೋರಿದರು.
ನಾನು ಸದಾ ಜನರ ಮುಂದೆ ಇದ್ದುಕೊಂಡು ಜನಸೇವೆ ಮಾಡುತ್ತೇನೆ. ಖಾನಾಪೂರ ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ. ಬೇರೆಯವರಂತೆ ಕ್ಷುಲ್ಲಕ ರಾಜಕಾರಣ ಮಾಡುವುದಿಲ್ಲ. ಜನರ ಹಿತಾಸಕ್ತಿ ಹಾಗೂ ಮನೋಭಾವನೆಗಳನ್ನು ಅರಿತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ. ಮತ ನೀಡುವ ಮತದಾರರೇ ನನಗೆ ದೊಡ್ಡ ಶಕ್ತಿ. ನೀವು ನೀಡುತ್ತಿರುವ ಶಕ್ತಿಯನ್ನು ಉಪಯೋಗಿಸಿಕೊಂಡು ಅಭಿವೃದ್ಧಿ ಎಂಬ ಮಂತ್ರವನ್ನು ಜಪಿಸುತ್ತೇನೆ. ನಿಮ್ಮೆಲ್ಲ ಆಶೋತ್ತರಗಳಿಗೆ ಸದಾ ಕಾಲ ಸ್ಪಂದಿಸುತ್ತೇನೆ ಎಂದು ಲಖನ್ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮಜರ್ ಖಾನಾಪುರೆ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ನ್ಯಾಯವಾದಿ ಎಚ್.ಎನ್. ದೇಸಾಯಿ, ಕ್ಷತ್ರೀಯ ಮರಾಠಾ ಪರಿಷತ್ ಜಿಲ್ಲಾ ಉಪಾಧ್ಯಕ್ಷ ದಿಲೀಪ ಪವಾರ, ಜಿಪಂ ಮಾಜಿ ಸದಸ್ಯರಾದ ತುಕಾರಾಮ ಕಾಗಲ, ವಿಶಾಲ ಪಾಟೀಲ, ಖಾಸೀಂ ಹಟ್ಟಿಹೊಳಿ, ಮೇಘಾ ಕುಂದರಗಿ, ಪಟ್ಟಣ ಪಂಚಾಯತ ಸದಸ್ಯರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹೈಕಮಾಂಡ್ ಆಶಿರ್ವಾದ ಇದ್ದಿದ್ರಿಂದ ಬದುಕಿದ್ದೇನೆ, ಇಲ್ಲದಿದ್ರೆ ನನ್ನನ್ನು ಇಷ್ಟೊತ್ತಿಗೆ ಮುಗಿಸ್ತಿದ್ರು – ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button