
ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ನೀರಿನಿಂದ ತುಂಬಿದ್ದ ಬಾವಿಗೆ ಕಾರು ಉರುಳಿ ಬಿದ್ದಿದ್ದ ಪರಿಣಾಮ ಒಂದೇ ಕುಟುಂಬದ ಒಂಬತ್ತು ಜನರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ದಿಂದೋರ ತಾಲೂಕಿನಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಮೃತರನ್ನು ಸುನಿಲ್ ದತ್ತು ದರ್ಗೋಡೆ, ರಾಖಿ ಸುನಿಲ್ ದರ್ಗೋಡೆ, ಉಷಾ ಅನಿಲ್ ದರ್ಗೋಡೆ, ಶ್ರದ್ಧಾ ಅನಿಲ್ ದರ್ಗೋಡೆ ಮತ್ತು ಶ್ರಾವಣಿ ಅನಿಲ್ ದರ್ಗೋಡೆ ಸೇರಿದಂತೆ ಕುಟುಂಬದ ಇತರ ಸದಸ್ಯರೆಂದು ಗುರುತಿಸಲಾಗಿದೆ.
ಇವರೆಲ್ಲರೂ ದಿಂದೋರಿ ತಾಲೂಕಿನ ಇಂದೋರ್ ಗ್ರಾಮದ ನಿವಾಸಿಗಳಾಗಿದ್ದು, ಖಾಸಗಿ ಕೋಚಿಂಗ್ ಕ್ಲಾಸ್ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದಾಗ ರಾತ್ರಿ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮತ್ತು ದಿಂದೋರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಬಾವಿಯಲ್ಲಿ ನೀರು ಹೆಚ್ಚಿದ್ದರಿಂದ ಮತ್ತು ಕತ್ತಲಿದ್ದ ಕಾರಣ ರಕ್ಷಣಾ ಕಾರ್ಯಕ್ಕೆ ಮೊದಲು ಅಡಚಣೆಯಾಗಿದೆ. ನಂತರ ಎರಡು ಹೈಡ್ರಾ ಕ್ರೇನ್‌ಗಳ ಸಹಾಯದಿಂದ ಕಾರನ್ನು ಹೊರತೆಗೆಯಲಾಗಿದೆ. ಆದರೆ ದುರದೃಷ್ಟವಶಾತ್, ಕಾರಿನಲ್ಲಿದ್ದ ಒಂಬತ್ತು ಜನರು ಕೂಡಾ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಿಂದೋರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ದಿಂದೋರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಒಂದೇ ಕುಟುಂಬದ ಇಷ್ಟು ಮಂದಿ ಸಾವನ್ನಪ್ಪಿರುವುದು ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.



