*ಮತದಾರರ ಜಾಗೃತಿಗಾಗಿ ವ್ಯಂಗ್ಯ ಚಿತ್ರ ಪ್ರದರ್ಶನ: ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ*
ಪ್ರಗತಿವಾಹಿನಿ ಸುದ್ದಿ ಬೆಂಗಳೂರು, ಜನವರಿ 21: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಅಂಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸಲು ರಾಜ್ಯಮಟ್ಟದ ವ್ಯಂಗ್ಯ ಚಿತ್ರಕಾರರ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ತಿಳಿಸಿದರು.
ಇಂದು ನಗರದ ವಿಧಾನಸೌಧದ ಪೂರ್ವದಿಕ್ಕಿನ ಮುಂಬಾಗದಲ್ಲಿ ಮುಖ್ಯ ಚನಾವಣಾಧಿಕಾರಿಗಳ ಕಚೇರಿವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ವ್ಯಂಗ್ಯ ಚಿತ್ರಕಾರರ ಕಾರ್ಯಾಗಾರ ಹಾಗೂ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಒಂದು ಚಿತ್ರ ಸಾವಿರ ಪದಗಳಿಗೆ ಸಮಾನ ಎಂಬ ನಾಣ್ಣುಡಿಯಂತೆ ಒಂದು ಗಂಟೆ ಭಾಷಣದಲ್ಲಿ ಹೇಳುವ ವಿಷಯವನ್ನು ವ್ಯಂಗ್ಯಚಿತ್ರಕಾರರು ಒಂದು ಚಿತ್ರದಲ್ಲಿ ಹೇಳಬಲ್ಲರು, ಇದೊಂದು ಅತ್ಯಂತ ಪರಿಣಾಮಕಾರಿ ಜಾಗೃತಿ ಮಾಧ್ಯಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಲೇಬೇಕು , ಎಲ್ಲರೂ ಭಾಗವಹಿಸಿದಾಗ ಮಾತ್ರ ಉತ್ತಮ ನಾಯಕರನ್ನು ಚುನಾಯಿಸಲು ಸಾಧ್ಯ ಎಂದರು.
ಮತದಾನ ನಮ್ಮ ನಿಮ್ಮೇಲ್ಲರ ಹಕ್ಕು ಹಾಗು ಜವಾಬ್ದಾರಿ, ನಾವು ತಪ್ಪದೆ ಮತದಾನ ಮಾಡಬೇಕು . ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ಸಾರ್ವಜನಿಕರಿಗೆ ಮತದಾನದ ಮಹತ್ವವನ್ನು ಸಾರುವ ಅಂಗವಾಗಿ ಈ ವ್ಯಂಗ್ಯಚಿತ್ರ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ದೇಶದ ಆಡಳಿತವನ್ನು ನಿರ್ಧರಿಸುವ ಈ ಸಂದರ್ಭದಲ್ಲಿ ಯಾರೋಬ್ಬರು ತಮ್ಮ ಜವಾಬ್ದಾರಿಯನ್ನು ಮರೆಯಬಾರು ತಪ್ಪದೇ ಮತದಾನ ಮಾಡಬೇಕು ಎಂದು ಕರೆ ನೀಡಿದರು.
2024ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಮುಖ್ಯ ಚುನಾವಣಾಧಿಕಾರಿ ಕಛೇರಿಯಿಂದ ವ್ಯಂಗ್ಯಚಿತ್ರಗಳನ್ನು ಆನ್ ಲೈನ್ ನಲ್ಲಿ ಸಹ ಆಹ್ವಾನಿಸಲಾಗಿತ್ತು. ಈಗಾಗಲೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ 30ಕ್ಕೂ ಹೆಚ್ಚು ಕಲಾವಿದರು ತಮ್ಮ ವ್ಯಂಗ್ಯಚಿತ್ರಗಳನ್ನು ಇಮೇಲ್ ಮೂಲಕ ಕಳುಹಿಸಿಕೊಟ್ಟಿದ್ದಾರೆ, ಅಂತಹುಗಳಲ್ಲಿ ಆಯ್ದ ಕೆಲವು ಚಿತ್ರಗಳನ್ನು ಮುದ್ರಿಸಿ ಇಂದು ಪ್ರದರ್ಶನಕ್ಕೆ ಇಡಲಾಗಿತ್ತು.
ಕಲಾವಿದರು, ವ್ಯಂಗ್ಯಚಿತ್ರಕಾರರು, ಹವ್ಯಾಸಿ ಕಲಾವಿದರು ಸೇರಿದಂತೆ ವಿಧ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.
ಇಂದು ಭಾನುವಾರ ಆಗಿದ್ದ ಕಾರಣಕ್ಕೆ ವಿಧಾನಸೌಧ ನೋಡಲು ಆಗಮಿಸಿದ್ದ ಸಾವಿರಾರು ಜನರು ಸ್ಥಳದಲ್ಲಿ ಚಿತ್ರ ರಚಿಸುತ್ತಿದ್ದ ಕಲಾವಿದರನ್ನು ಹಾಗೂ ಪ್ರದರ್ಶನವನ್ನು ವೀಕ್ಷಿಸಿದರು. ಕಾರ್ಯಾಗಾರದಲ್ಲಿ ಚಿಕ್ಕ ಮಕ್ಕಳು ದೊಡ್ಡವರ ಮತದಾನದ ಕುರಿತು ಬಿಡಿಸುತ್ತಿದ್ದ ಚಿತ್ರಗಳು ನೋಡುಗರನ್ನು ಚಕಿತಗೊಳಿಸಿದವು.
ಕಲಾವಿದರು ಮತದಾನದ ಕುರಿತು ಜಾಗೃತಿ ಹಾಗು ಮಹತ್ವವನ್ನು ಸಾರುವಂತಹ ನೂರಾರು ಚಿತ್ರಗಳನ್ನು ರಚಿಸಿದರು.
ಸ್ಥಳದಲ್ಲಿ ವಿಡಿಸಿದ ಚಿತ್ರಗಳನ್ನು ಇಂದಿನ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲಾಯಿತು. ಈ ಕಾರ್ಯಾಗಾರದಲ್ಲಿ ಉತ್ತಮ ಜಾಗೃತಿ ಮೂಡಿಸುವ ಅತ್ಯುತ್ತಮ 25 ಚಿತ್ರಗಳನ್ನು ಚುನಾವಣಾ ಆಯೋಗದಿಂದ ಮತದಾನದ ಜಾಗೃತಿಗಾಗಿ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುವುದು.
ಈ ಸಂದರ್ಭದಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿ ಕೂರ್ಮರಾವ್, ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್, ಸ್ವೀಪ್ ನೋಡಲ್ ಅಧಿಕಾರಿಯಾದ ಪಿ.ಎನ್ ವಸ್ತ್ರದ್, ಮಾಹಿತಿ ತಂತ್ರಜ್ಞಾನ ಹಾಗೂ ಮಾಧ್ಯಮ ವಿಶೇಷ ಅಧಿಕಾರಿಯಾದ ಸೂರ್ಯ ಸೇನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ