Kannada NewsKarnataka NewsLatest

*ಜಾತಿ ನಿಂದನೆ ಹಿನ್ನೆಲೆ ಮಹಿಳೆ ಆತ್ಮಹತ್ಯೆ: 8 ಜನರ ವಿರುದ್ಧ ಕೇಸ್*

ಪ್ರಗತಿವಾಹಿನಿ ಸುದ್ದಿ: ನರೇಗಾ ಕಾಮಗಾರಿ ವಿರೋಧಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಜಾತಿನಿಂದನೆ ಮಾಡಲಾಗಿದ್ದು, ಇದರಿಂದ ಮನನೊಂದ ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಮಗ ಗ್ರಾಮ ಪಂಚಾಯಿತಿ ಪಿಡಿಒ ಸೇರಿ 8 ಜನರ ವಿರುದ್ಧ ಜಾತಿನಿಂದನೆಯ ದೂರು ದಾಖಲಿಸಿದ್ದಾನೆ.

ಪಿಡಿಒ ಖಾಜಾಬಾನು, ಗ್ರಾ.ಪಂ ಅಧ್ಯಕ್ಷ ಉದಯ್ ಚಿಲಗೋಡು, ನರೇಗಾ ಸಿಬ್ಬಂದಿ ಬಸವರಾಜ್, ಪ್ರಕಾಶ್, ಕೊಟ್ರೇಶ್, ಶಿವಕುಮಾರ್, ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನನ್ನ ತಾಯಿಗೆ ಜಾತಿನಿಂದನೆ ಮಾಡಿದ್ದಾರೆ. ಅನ್ನೋರು ತಾಯಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಇದರಿಂದ ಮನನೊಂದ ನನ್ನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ತಾಯಿ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ದೂರು ದಾಖಲಿಸಿದ್ದಾರೆ.

ಘಟನೆ ಆಗಿದ್ದು ಹೇಗೆ..?

ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಿಗೇರಿ ಗ್ರಾಮದಲ್ಲಿ ದೀದ್ಗಿ ಮೈಲವ್ವ ಅವರು, ಐದು ಎಕರೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿದ್ದರು. ಕಳೆದ 15-20 ವರ್ಷದಿಂದ ಅವರು ಸಾಗುವಳಿ ಮಾಡುತ್ತಿದ್ದರು. ಆದರೆ, ಪಂಚಾಯಿತಿಯಿಂದ ನರೇಗಾ ಕಾಮಗಾರಿ ಕೈಗೊಳ್ಳಲಾಗಿದ್ದು, ಇದನ್ನು ದೀದ್ಗಿ ಮೈಲವ್ವ ಅವರು ವಿರೋಧಿಸಿದ್ದರು. ಜಮೀನಿನಲ್ಲಿ ಗೋಕಟ್ಟೆ ನಿರ್ಮಿಸಲು ಏಪ್ರಿಲ್‌ 5 ರಂದು ಕಾಮಗಾರಿ ಆರಂಭಿಸಿದ್ದನ್ನು ಇವರು ವಿರೋಧಿಸಿದ್ದರು.

ಕಾಮಗಾರಿಗೆ ವಿರೋಧಿಸಿದರೂ ಕಾಮಗಾರಿ ಮುಂದುವರಿಸಿದ ಕಾರಣ ದೀದ್ಗಿ ಮೈಲವ್ವ ಅವರು ಏಪ್ರಿಲ್‌ 5 ರಂದೇ ವಿಷಸೇವಿಸಿದ್ದರು. ಕೂಡಲೇ ಮಹಿಳೆಯನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ಮೃತಪಟ್ಟಿದ್ದರು. ಹಾಗಾಗಿ, ದೀದ್ಗಿ ಮೈಲವ್ವ ಅವರ ಪುತ್ರ ದುರುಗಪ್ಪ ಅವರು ಈಟ್ಟಗಿ ಪೊಲೀಸ್‌ ಠಾಣೆಯಲ್ಲಿ ಎಂಟು ಮಂದಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button