*ಸೆ.22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ವೀರಶೈವ, ಲಿಂಗಾಯತ ಎಂದೇ ಬರೆಸಲು ಮಹಾಸಭಾ ಮನವಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ಬರುವ 22ರಿಂದ ಆರಂಭವಾಗಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿರುವ ಇತರೆ ಕಾಲಂನಲ್ಲಿ ವೀರಶೈವ-ಲಿಂಗಾಯತ ಎಂದು ಬರೆಸುವಂತೆ, ಸಮಾಜದ ಬಾಂಧವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮನವಿ ಮಾಡಿದೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಭಾದ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಹಾಗೂ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ, ಹಿಂದಿನಿಂದಲೂ ಮಹಾಸಭಾ ವೀರಶೈವ ಲಿಂಗಾಯತ ಧರ್ಮದ ಪ್ರತಿಪಾದನೆ ಮಾಡುತ್ತಾ ಬಂದಿದೆ. ಹೀಗಾಗಿ ಧರ್ಮದ ಕಾಲಂನ ಇತರೆ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ ಎಂದರು.
ಉಳಿದಂತೆ ಜಾತಿಯ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದು ಬರೆಸುವಂತೆ ಹಾಗೂ ಉಪ ಜಾತಿಯ ಕಾಲಂನಲ್ಲಿರುವ ತಮ್ಮ ತಮ್ಮ ಉಪಜಾತಿ ಹೆಸರು ಬರೆಸುವಂತೆ ಮನವಿ ಮಾಡಿದರು.
ಸರ್ಕಾರಕ್ಕೆ ನಾಡಿನ ಜನರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ನಿಖರ ಮಾಹಿತಿ ದೊರೆತರೆ, ನಾಡಿನ ಜನರೆಲ್ಲರ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸಲು ಅನುವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಜಾತಿ ಪ್ರಮಾಣ ಪತ್ರಕ್ಕೂ ಸಮೀಕ್ಷೆಗೂ ಸಂಬಂಧವಿಲ್ಲ-ಈಶ್ವರ ಖಂಡ್ರೆ:
ಮೀಸಲಾತಿಗಾಗಿ ನೀಡುವ ಜಾತಿ ಪ್ರಮಾಣ ಪತ್ರಕ್ಕೂ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೂ ಸಂಬಂಧವಿಲ್ಲ. ನೈಜ ಜಾತಿ, ಶಾಲಾ ದಾಖಲಾತಿ ಇತ್ಯಾದಿ ಪರಾಮರ್ಶಿಸಿದ ಬಳಿಕವಷ್ಟೇ ಜಾತಿ ಪ್ರಮಾಣ ಪತ್ರ ನೀಡಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ನೈಜ ಜಾತಿಯನ್ನೇ ಸಮೀಕ್ಷೆಯಲ್ಲಿ ಬರೆಸಬೇಕು, ನಮ್ಮ ಸಮುದಾಯದ ನೈಜ ಸಂಖ್ಯೆ ಹೊರಹೊಮ್ಮಲು ಸಹಕರಿಸಬೇಕು ಎಂದು ಸಮಸ್ತ ವೀರಶೈವ ಲಿಂಗಾಯತ ಸಮಾಜದ ಬಾಂಧವರಿಗೆ ಸಭಾ ಪರಿವಾಗಿ ಮನವಿ ಮಾಡಿದರು.
ಎಲ್ಲ ಜಾತಿ, ಸಮುದಾಯಕ್ಕೂ ನ್ಯಾಯ ದೊರಕುವ ರೀತಿಯಲ್ಲಿ ಸಮೀಕ್ಷೆಯನ್ನು ನಡೆಸುವಂತೆ ಸಭಾ ಸರ್ಕಾರಕ್ಕೆ ಮನವಿ ಮಾಡಿದೆ, ಅದೇ ರೀತಿ ಎಲ್ಲ ಪರಮಪೂಜ್ಯ ಸ್ವಾಮೀಜಿಗಳಿಗೂ ಈ ಸಂಬಂಧ ಏಕಮತ್ಯದಿಂದ ಮತ್ತು ಒಕ್ಕೊರಲಿನಿಂದ ಸಮೀಕ್ಷೆಯಲ್ಲಿ ನೈಜವಾದ ಜಾತಿ ಹೆಸರು ಬರೆಸುವಂತೆ ಸಭಾ ಮನವಿ ಮಾಡಿದೆ ಎಂದು ತಿಳಿಸಿದರು.
ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಮಹದೇವ್ ಬಿದರಿ ಮಾತನಾಡಿ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿ ಗತಿಯ ಸಮೀಕ್ಷೆ ಆಧಾರದಲ್ಲಿ ಸಮುದಾಯದ ಹಿಂದುಳಿದಿರುವಿಕೆ ಗುರುತಿಸಿ ಅವರಿಗೆ ಸೌಲಭ್ಯ ಕಲ್ಪಿಸುತ್ತದೆ. ಈ ಹಿಂದಿನ ಸಮೀಕ್ಷೆಗಳಲ್ಲಿ ವೀರಶೈವ ಮತ್ತು ಲಿಂಗಾಯತರನ್ನು ಒಂದು ಜಾತಿ ಎಂದು ಪರಿಗಣಿಸಲಾಗಿದೆ. ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಅಧಿಕೃತವಾಗಿ ನೀಡಿಲ್ಲ. ಅದನ್ನು ಪರಿಗಣಿಸುವ ಅಗತ್ಯವಿದೆ ಎಂದರು.
ನಮ್ಮ ಸಮಾಜದಲ್ಲಿ ಹಿಂದುಳಿದವರು, ಅತಿ ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದವರಿದ್ದಾರೆ. ಹೀಗಾಗಿ ಪಾರದರ್ಶಕವಾಗಿ ವಿವಿಧ ವೃತ್ತಿಯನ್ನು ಮಾಡುವ ಬಡವ ಮತ್ತು ಕಡು ಬಡವರಿಗೆ ಪ್ರಾಮಾಣಿಕವಾಗಿ ಅಂಕ ನೀಡಿ, ಸೂಕ್ತ ಪ್ರವರ್ಗಕ್ಕೆ ಸೇರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಕಾರ್ಯದರ್ಶಿ ರೇಣುಕ ಪ್ರಸನ್ನ ಮತ್ತು ವೀಣಾ ಕಾಶೆಪ್ಪನವರ್ ಪಾಲ್ಗೊಂಡಿದ್ದರು.