ಪ್ರಗತಿವಾಹಿನಿ ಸುದ್ದಿ: “ಕಾವೇರಿ ಜಲಾನಯನದ ಪ್ರಮುಖ ಅಣೆಕಟ್ಟುಗಳಲ್ಲಿ ಸರಾಸರಿ ಶೇ. 62 ರಷ್ಟು ಮಾತ್ರ ನೀರಿನ ಲಭ್ಯತೆಯಿದೆ. ಸುಮಾರು 19 ಟಿಎಂಸಿಯಷ್ಟು ನೀರಿನ ಕೊರತೆ ಅಂದರೆ ಶೇ. 28 ರಷ್ಟು ನೀರಿನ ಕೊರತೆ ಕಂಡುಬಂದಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾವೇರಿ ನೀರಿನ ವಿಚಾರವಾಗಿ ನಡೆದ ಸಭೆಯ ನಂತರ ನಡೆದ ಮಾಧ್ಯಮಗೋಷ್ಠಿ ಹಾಗೂ ಇಂದಿರಾಗಾಂಧಿ ಭವನದಲ್ಲಿ ಮಾತನಾಡಿದ ಅವರು “ಹಾರಂಗಿ ಶೇ.73, ಹೇಮಾವತಿ ಶೇ.55, ಕೆ.ಆರ್.ಎಸ್ ಶೇ.54, ಕಬಿನಿಯಲ್ಲಿ ಶೇ. 96 ರಷ್ಟು ನೀರಿನ ಪ್ರಮಾಣವಿದೆ. ಕಳೆದ ವರ್ಷ ಸಾಕಷ್ಟು ಕೊರತೆ ಉಂಟಾಗಿತ್ತು. ನಾಲ್ಕು ವರ್ಷಗಳ ಹಿಂದೆ ಸಮೃದ್ಧವಾಗಿ ಮಳೆಯಾದ ಕಾರಣ ಕೊರತೆ ಕಂಡು ಬಂದಿರಲಿಲ್ಲ” ಎಂದರು.
ಕಬಿನಿಯಿಂದ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆಯೇ ಎಂದಾಗ “ಕಬಿನಿಯು ಶೇ96 ರಷ್ಟು ತುಂಬಿದ್ದು ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ಒಳಹರಿವಿನ ಪ್ರಮಾಣದಷ್ಟೇ ನೀರನ್ನು ಹೊರಗೆ ಬಿಡಲಾಗುತ್ತಿದೆ” ಎಂದು ಹೇಳಿದರು.
ಮಂಡ್ಯದಲ್ಲಿ ರೈತರ ಬೆಳೆಗಳಿಗೆ ನೀರು ಕೊಡಲಾಗುತ್ತದೆಯೇ ಎಂದು ಕೇಳಿದಾಗ “ಸರ್ವಪಕ್ಷಗಳ ಸಭೆ ನಡೆದ ಮೇಲೆ ಇದರ ಬಗ್ಗೆ ಉತ್ತರಿಸಲಾಗುವುದು” ಎಂದು ಹೇಳಿದರು.
“ನಮಗೆ ಮಳೆ ಕೊರತೆ ಉಂಟಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ 1 ಟಿಎಂಸಿ ನೀರು ಹರಿಸಬೇಕು ಎಂದು ಹೇಳಿದೆ. ನಾನು ದೆಹಲಿಯಲ್ಲಿ ಇರುವ ವಕೀಲರಾದ ಮೋಹನ್ ಕಾತರಕಿ, ಶ್ಯಾಮ್ ದಿವಾನ್ ಅವರ ಬಳಿ ಮಾತನಾಡಿದ್ದೇನೆ. ಅವರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ” ಎಂದು ತಿಳಿಸಿದರು.
ತುರ್ತು ಪರಿಸ್ಥಿತಿ ನಂತರವೂ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ:
ಜುಲೈ 25 ರಂದು ಬಿಜೆಪಿಯಿಂದ ಸಂವಿಧಾನ ಹತ್ಯಾ ದಿನ ಆಚರಣೆಯ ಘೋಷಣೆ ಬಗ್ಗೆ ಕೇಳಿದಾಗ “ತುರ್ತು ಪರಿಸ್ಥಿತಿಯ ನಂತರವೂ ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿಗಳನ್ನಾಗಿ ಮಾಡಿದ್ದರು. ಈ ದೇಶದ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ” ಎಂದು ಉತ್ತರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ