ಮಂಡ್ಯ, ಮದ್ದೂರು ಬಂದ್; ರೈತರ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಸಾಥ್
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ರೈತರ ಪ್ರತಿಭಟನೆ ಭುಗಿಲೆದ್ದಿದ್ದು, ಅನ್ನದಾತನ ಪ್ರತಿಭಟನೆಗೆ ಕನ್ನಡಪರ ಸಂಘಟನೆ, ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಸಾಥ್ ನೀಡಿವೆ.
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ಇಂದು ಮಂಡ್ಯ, ಮದ್ದೂರು ಬಂದ್ ಮಾಡಿ ರೈತ ಸಂಗಘನೆ ಹಾಗೂ ಕನ್ನಡ ಪರ ಸಂಘಟನೆ ಪ್ರತಿಭಟನೆ ತೀವ್ರಗೊಳಿಸಿವೆ. ರಾಜಧಾನಿ ಬೆಂಗಳೂರಿನಲ್ಲಿಯೂ ವಿವಿಧೆಡೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.
ಬೆಂಗಳೂರು ಮೈಸೂರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿರುವ ರೈತರು ರಸ್ತೆಯಲ್ಲಿಯೇ ಉರುಳುಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಭಗವಹಿಸಿದ್ದಾರೆ.
ಮಂಡ್ಯದಲ್ಲಿ ರೈತರು ಬಾಯಿಗೆ ಮಣ್ಣು ಹಾಕಿಕೊಂಡು ರೈತರ ಬಾಯಿಗೆ ಮಣ್ಣು ಹಾಕಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಲೆ ಮೇಲೆ ಚಪ್ಪಡಿ ಕಲ್ಲು ಹೊತ್ತು ಪ್ರತಿಭಟಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ತಮಿಳುನಾಡು ಸರ್ಕಾರದ ಭೂತ ದಹನ ಮಾಡಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ, ರೈತರ ಬೆಳೆಗಳಿಗೆ ಹರಿಸುವಂತೆ ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ