*ಕಾವೇರಿ ಹೋರಾಟ: ರೈತರ ಪ್ರತಿಭಟನೆಗೆ ಸಾಥ್ ನೀಡಿದ ನಿರ್ಮಲಾನಂದನಾಥ ಸ್ವಾಮೀಜಿ, ನಟ ಅಭಿಷೇಕ್ ಅಂಬರೀಶ್*
ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಕಾವೇರಿ ನೀರಿಗಾಗಿ ಮಂಡ್ಯದಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳ ಪ್ರತಿಭತನೆ ತೀವ್ರಗೊಂಡಿದೆ. ರೈತರ ಪ್ರತಿಭಟನೆಗೆ ಆದಿಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ, ನಟ ಅಭಿಷೇಕ್ ಅಂಬರೀಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೊಶಿ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ತಮಿಳುನಾಡಿಗೆ ಮತ್ತೆ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್ ನಂತೆ ಕಾವೇರಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ರೈತ ಸಂಘಟನೆಗಳ ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ. ಮಂಡ್ಯದಲ್ಲಿ ಇಂದು ಸರಣಿ ಪ್ರತಿಭಟನೆಗಳನ್ನು ನಡೆಸಲಾಗಿದ್ದು, ಪ್ರತಿಭಟನೆಯಲ್ಲಿ ಹಲವರು ಭಾಗಿಯಾಗಿದ್ದಾರೆ.
ಬೆಂಗಳೂರಿಗೆ ನೀರು ಸರಬರಾಜು ಮಾಡುವ ಟಿ.ಕೆ.ಹಳ್ಳಿ ಪಂಪ್ ಹೌಸ್ ಗೆ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕಲು ಯತ್ನಿಸಿದ್ದು, ಬೆಂಗಳೂರಿಗೆ ನೀರು ನಿಲ್ಲಿಸಿ ರೈತರ ಹೊಲಗಳಿಗೆ ನೀರು ಹರಿಸುವಂತೆ ಕನ್ನಡಪರ ಸಂಘಟನೆ ಹಾಗೂ ರೈತ ಸಂಘಟನೆಗಳು ಆಗ್ರಹಿಸಿವೆ. ಈ ವೇಳೆ ಹಲವು ಪ್ರತಿಭಟನಾಕಾರರನ್ನು ರೈತರು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ಕನ್ನಡಪರ ಸಂಘತನೆ ಕರೆ ನೀಡಿದ್ದ ಪ್ರತಿಭಟನೆಗೆ ನಿರ್ಮಲಾನಂದನಾಥ ಸ್ವಾಮಿಜಿ ಸಾಥ್ ನೀಡಿದ್ದು, ಕಾವೇರಿ ಕೊಳ್ಳದಲ್ಲಿ ನೀರಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು. ಇದೇ ರೀತಿ ಮುಂದುವರೆದರೆ ಕುಡಿಯುವ ನಿರೀಗೂ ತತ್ವಾರ ಶುರುವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಟ ಅಭಿಷೇಕ್ ಅಂಬರೀಶ್ ಕೂಡ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ, ರಾಜ್ಯದ ರೈತರ ಹಿತರಕ್ಷಣೆಗಾಗಿ ಸರ್ಕಾರ ಕೂಡಲೇ ಮುಂದಾಗಬೇಕು. ಕಾವೇರಿ ನೀರಿಗಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸೋಣ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ