
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆರೋಗ್ಯವಂತ ಹವ್ಯಾಸಗಳು ಮಕ್ಕಳನ್ನು ಸಧೃಢರನ್ನಾಗಿಸುತ್ತದೆ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಹೇಳಿದರು.
ಅವರು ಇಂದು ನಗರದ ಕೆಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳು ಭಾವೀ ಪ್ರಜೆಗಳು. ಅವರನ್ನು ಆರೋಗ್ಯವಂತರನ್ನಾಗಿ ಬೆಳೆಸುವುದು ತಂದೆ ತಾಯಂದಿರ ಹಾಗೂ ಪೋಷಕರ ಆದ್ಯ ಕರ್ತವ್ಯವಾಗಿದೆ. ಊಟ ತಿಂಡಿಗಳ ಸೇವನೆಯ ಮೊದಲು ಹಾಗೂ ಶೌಚದ ನಂತರ ಸರಿಯಾಗಿ ಸಾಬೂನಿನಿಂದ ಕೈತೊಳೆಯುವುದು, ಆಟವಾಡಿ ಬಂದ ನಂತರ ಚೆನ್ನಾಗಿ ಕೈ ಕಾಲು ತೊಳೆಯುವುದು, ಬಯಲಿನಲ್ಲಿ ಶೌಚ ಮಾಡದೇ ಇರುವುದು, ಬಯಲಿನಲ್ಲಿ ಬರಿಗಾಲಿನಿಂದ ತಿರುಗಾಡದೇ ಇರುವುದು, ಉಗುರುಗಳನ್ನು ಬೆಳೆಸದೇ ಇರುವುದು ಹಾಗೂ ಇನ್ನಿತರೆ ಅನಾರೋಗ್ಯಕರ ಹವ್ಯಾಸಗಳಿಂದ ಮಕ್ಕಳನ್ನು ದೂರವಿರುವಂತೆ ಮಕ್ಕಳಿಗೆ ಅರಿವು ಮೂಡಿಸುವುದು ಪಾಲಕರ ಹೊಣೆಯಾಗಿದೆ ಎಂದು ತಿಳುವಳಿಕೆ ನೀಡಿದರು.
ಜಂತುಹುಳಗಳು ನಮ್ಮ ದೇಹದಲ್ಲಿ ಹೇಗೆ ಸೇರುತ್ತವೆ? ಅವುಗಳು ಹೇಗೆ ಬೆಳವಣಿಗೆ ಹೊಂದುತ್ತವೆ? ಅವುಗಳಿಂದ ಹೇಗೆ ದೂರವಿರಬೇಕು? ಮತ್ತು ಅವುಗಳ ನಿರ್ವಹಣೆಯ ಬಗೆಯ ಬಗ್ಗೆ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಹೆಸರಾಂತ ವೈದ್ಯೆ ಡಾ. ಸೌಮ್ಯಾ ವೇರ್ಣೇಕರ ಹಾಗೂ ಸ್ನಾತಕೋತ್ತರ ವೈದ್ಯ ವಿದಾರ್ಥಿ ಡಾ. ಸುದೀಪ ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಪಿಡಿಯಾಟ್ರಿಕ್ ಅಸೋಶಿಯೇಷನ್ ನ ಕಾರ್ಯದರ್ಶಿ ಡಾ. ಭಾವನಾ ಕೊಪ್ಪದ, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಎಮ್ ಎಸ್ ಕಡ್ಡಿ, ಹೆಸರಾಂತ ವೈದ್ಯ ಡಾ. ಸಂತೋಷಕುಮಾರ ಕರಮಸಿ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಮಾರು ೬೦ ಕ್ಕೂ ಅಧಿಕ ಪಾಲಕರು, ಮಕ್ಕಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು ಹಾಗೂ ಎಲ್ಲರಿಗೂ ಜಂತುಹುಳ ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಯಿತು.
ಅರುಣ ನಾಗಣ್ಣವರ ಸ್ವಾಗತಿಸಿದರು. ಸಂತೋಷ ಇತಾಪೆ ನಿರೂಪಿಸಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ