Kannada NewsKarnataka NewsNationalPolitics

*ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಡಿಪಿಆರ್‌ಗೆ ಕೇಂದ್ರದ ಒಪ್ಪಿಗೆ: ಇಂಧನ ಸಚಿವ ಜಾರ್ಜ್‌ ಹರ್ಷ*

ಪ್ರಗತಿವಾಹಿನಿ ಸುದ್ದಿ: ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌)ಗೆ ಕೇಂದ್ರ ವಿದ್ಯುತ್‌ ಪ್ರಾಧಿಕಾರ ಶುಕ್ರವಾರ ಅನುಮೋದನೆ ನೀಡಿದೆ.

ಕರ್ನಾಟಕ ವಿದ್ಯುತ್‌ ನಿಗಮ ಅನುಷ್ಠಾನಗೊಳಿಸುತ್ತಿರುವ 2000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ವಿದ್ಯುತ್‌ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿರುವ ಶಿವಮೊಗ್ಗದ ತಲಕಳಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯಗಳ ಮಧ್ಯ ಭಾಗದಲ್ಲಿ ಯೋಜನೆ ಅನುಷ್ಠಾನಗೊಳ್ಳಲ್ಲಿದೆ.

ದೇಶದ ಹೈಡ್ರೋ ಪಂಪ್ಡ್ ಸ್ಟೋರೇಜ್ ಯೋಜನೆಗಳ ಅನುಷ್ಠಾನವನ್ನು ವೇಗಗೊಳಿಸಲು ಅನುಮೋದನೆ ಪ್ರಕ್ರಿಯೆಯನ್ನು ಕೇಂದ್ರ ವಿದ್ಯುತ್ ಪ್ರಾಧಿಕಾರ ಪರಿಷ್ಕರಿಸಿದೆ. ಶರಾವತಿ ಜತೆಗೆ ಒಡಿಶಾದಲ್ಲಿ 600 ಮೆಗಾವ್ಯಾಟ್ ಇಂದ್ರಾವತಿ ಯೋಜನೆಗೂ ಪ್ರಾಧಿಕಾರ ಅನುಮೋದನೆ ನೀಡಿದೆ.

ಸಚಿವ ಜಾರ್ಜ್‌ ಹರ್ಷ

“ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಶರತಾವತಿ ಯೋಜನೆ ಅನಿವಾರ್ಯವಾಗಿದ್ದು, ಪರಿಸರಕ್ಕೆ ಹಾನಿಯಾಗದಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಗೆ ಅನುಮೋದನೆ ನೀಡಿರುವ ಕೇಂದ್ರ ವಿದ್ಯುತ್ಛಕ್ತಿ ಪ್ರಾಧಿಕಾರಕ್ಕೆ ಧನ್ಯವಾದ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಅನುಷ್ಠಾನಕ್ಕೆ ತ್ವರಿತ ಕ್ರಮಗಳನ್ನು ಕೈಗೊಂಡು ಕೇಂದ್ರದಿಂದ ಅಗತ್ಯ ಅನುಮತಿಗಳನ್ನು ಪಡೆಯಲು ಪ್ರಸ್ತಾವನೆಗಳನ್ನು ಕಳುಹಿಸಲಾಗಿತ್ತು. ಇದೀಗ, ಕೇಂದ್ರದ ಪ್ರಾಧಿಕಾರ ಡಿಪಿಆರ್‌ಗೆ ಒಪ್ಪಿಗೆ ನೀಡಿರುವುದು ನಮ್ಮ ಪ್ರಯತ್ನಕ್ಕೆ ಸಿಕ್ಕ ಫಲ. ಇನ್ನುಳಿದ ಅನುಮತಿಗಳನ್ನು ಶೀಘ್ರದಲ್ಲೇ ಪಡೆದು ಯೋಜನೆಯ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬದ್ಧ,” ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಒಮ್ಮೆ ಹರಿದುಹೋಗಿ ವಿದ್ಯುತ್ ಉತ್ಪಾದನೆ ಮಾಡಿಕೊಂಡ ನೀರನ್ನೇ ಮತ್ತೆ ಮೇಲಕ್ಕೆ ಪಂಪ್ ಮಾಡಿ ಅದೇ ನೀರಿನಿಂದ ಎರಡನೇ ಬಾರಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದಕ್ಕೆ ಸ್ವಲ್ಪ ವಿದ್ಯುತ್ ವೆಚ್ಚವಾಗುತ್ತದೆಯೇ ಹೊರತು ಮತ್ತೇನೂ ಬೇಕಿಲ್ಲ. ಒಂದು ಹನಿ ನೀರನ್ನೇ ಹಲವಾರು ಬಾರಿ ಬಳಕೆ ಮಾಡಿ ವಿದ್ಯುತ್‌ ಉತ್ಪಾದನೆ ಮಾಡುವುದು ಉತ್ತಮ ವಿಧಾನ ಎಂದು ತಿಳಿಸಿದ್ದಾರೆ.

ನವೀಕರಿಸಬಹುದಾದ ಸಾಮರ್ಥ್ಯ ಹೆಚ್ಚಿಸುವ ಮೂಲಕ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಹೈಡ್ರೋ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ಗಳು (ಪಿಎಸ್‌ಪಿ) ಅಗತ್ಯವಿದೆ. ನೀರನ್ನು ಪುನರ್ಬಳಕೆ ಮಾಡುವುದರಿಂದ, ನೀರಾವರಿ ಯೋಜನೆಗೆ ನೀರಿನ ಕೊರತೆಯಾಗುವುದಿಲ್ಲ, ಬೇಸಿಗೆಯಲ್ಲಿಯೂ ನೀರಿನ ಕೊರತೆ ಇದ್ದಾಗಲೂ ನಿರಂತರವಾಗಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ,”
-ಗೌರವ್‌ ಗುಪ್ತಾ, ಅಪರ ಮುಖ್ಯಕಾರ್ಯದರ್ಶಿ ಇಂಧನ ಇಲಾಖೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button