ಸೋಲುವ ಭೀತಿಯಿಂದ ವಿರೋಧ ಪಕ್ಷಗಳ ವಿರುದ್ಧ ಷಡ್ಯಂತ್ರ: ಡಿಸಿಎಂ ಡಿ.ಕೆ. ಶಿವಕುಮಾರ್
ಸೋಲುವ ಭೀತಿಯಿಂದ ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ವಿರುದ್ಧ ಶಡ್ಯಂತ್ರ ನಡೆಸುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : “ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಸರ್ಕಾರ, ವಿರೋಧ ಪಕ್ಷಗಳ ವಿರುದ್ಧ ಖಾತೆ ಮುಟ್ಟುಗೋಲು, ಮುಖ್ಯಮಂತ್ರಿಗಳ ಬಂಧನ, ರಾಜ್ಯಪಾಲರ ದುರ್ಬಳಕೆ, ಸಾಂವಿಧಾನಿಕ ಸಂಸ್ಥೆಗಳ ಪ್ರಯೋಗಕ್ಕೆ ಮುಂದಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
“ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ರಾಜ್ಯದಲ್ಲಿ 78 ಲಕ್ಷ ಪಕ್ಷದ ಸದಸ್ಯತ್ವ ನೀಡಿ ಪ್ರತಿಯೊಬ್ಬರಿಂದ 10 ರೂ. ಸಂಗ್ರಹಿಸಿ ಎಐಸಿಸಿಗೆ ನೀಡಿದೆವು. ಇನ್ನು ಯುವ ಕಾಂಗ್ರೆಸ್ ಸದಸ್ಯತ್ವದಿಂದ 90 ಕೋಟಿ ಸಂಗ್ರಹವಾಗಿತ್ತು. ಇನ್ನು ವಿಧಾನಸಭೆ ಚುನಾವಣೆ ಸಮಯದಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ತಲಾ 2 ಲಕ್ಷ ಸಂಗ್ರಹಿಸಿ ಸುಮಾರು 20 ಕೋಟಿ ಸಂಗ್ರಹಿಸಲಾಯಿತು.
ಈ ಬಾರಿ ಲೋಕಸಭೆ ಚುನಾವಣೆ ಸಮಯದಲ್ಲೂ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದೆ. ಎಐಸಿಸಿ ನಾಯಕರು ಬೇಡ ಎಂದು ತಿಳಿಸಿದರು. ನಾವು ಪಕ್ಷದ ಕಟ್ಟಡ, ಸಿಬ್ಬಂದಿ ವೇತನ ನೀಡಲು ಪರದಾಡುವ ಸಂದರ್ಭದಲ್ಲಿ ಎಐಸಿಸಿ ಖಾತೆಯಲ್ಲಿನ 290 ಕೋಟಿಯಷ್ಟು ಹಣವನ್ನು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಮೂಲಕ ಮುಟ್ಟುಗೋಲು ಹಾಕಿಸಿದ್ದಾರೆ. ನಾವು ನ್ಯಾಯಾಧಿಕರಮಕ್ಕೆ ಹೋದರೂ ನಮಗೆ ನಿರಾಳತೆ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಯಾರ ಬಳಿ ನ್ಯಾಯ ಕೇಳಬೇಕು?
ನಮ್ಮದು ವ್ಯವಹಾರಿಕ ಸಂಸ್ಥೆಯಲ್ಲ. ನಾವು ಜನರ ದೇಣಿಗೆ ಮಾತ್ರ ಸಿಗುತ್ತಿದೆ. ನಮಗೆ ಚುನಾವಣಾ ಬಾಂಡ್ ಮೂಲಕ ನಮಗೆ ಸಿಕ್ಕಿರೋದು ಕೇವಲ 11% ಮಾತ್ರ. ಆದರೆ ಬಿಜೆಪಿ ಅವರಿಗೆ 57% ಸಿಕ್ಕಿದೆ. ಇಂದು ಪತ್ರಿಕೆಗಳಲ್ಲಿ ಯಾರು ಯಾರಿಗೆ ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ನಾವು ಮಾಧ್ಯಮಗಳಲ್ಲಿ ಪಕ್ಷದವತಿಯಿಂದ ಜಾಹೀರಾತು ನೀಡಲು ಈಗ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡರೆ ವಿರೋಧ ಪಕ್ಷಗಳು ಚುನಾವಣೆ ನಡೆಸುವುದು ಹೇಗೆ?
ನಮ್ಮ 40 ವರ್ಷಕ್ಕೂ ಹೆಚ್ಚು ರಾಜಕಾರಣದಲ್ಲಿ ಇಂತಹ ಧೋರಣೆ ನೋಡಿರಲಿಲ್ಲ. ನೋಟು ರದ್ಧತಿ ನಂತರ ಎಲ್ಲಾ ವ್ಯವಹಾರ ಖಾತೆಗಳ ಮೂಲಕವೇ ಆಗುತ್ತಿದೆ. ಕೇಂದ್ರ ಸರ್ಕಾರದ ಈ ಧೋರಣೆ ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆ. ಸೋಲುವ ಭಯದಿಂದಾಗಿ ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ.
2004ರಲ್ಲೂ ಬಿಜೆಪಿಯವರು ಇದೇ ರೀತಿ ಅವರು “ಇಂಡಿಯಾ ಶೈನಿಂಗ್” ಎಂದು ಪ್ರಚಾರ ಮಾಡಿದರು. ಈ ಮಧ್ಯೆ ಯುಪಿಎ ಸರ್ಕಾರ ಬಂದಿತು. ಹೀಗಾಗಿ ಈ ಬಾರಿಯೂ ಎಲ್ಲಿ ಅಧಿಕಾರ ಕಳೆದುಕೊಳ್ಳುತ್ತೇವೋ ಎಂಬ ಆತಂಕದಲ್ಲಿ ಈ ರೀತಿ ಮಾಡುತ್ತಿದ್ದಾರೆ.
ಬಿಜೆಪಿಯ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಸೋಲುವ ಬಗ್ಗೆ ಅವರಿಗೆ ಮನವರಿಕೆಯಾಗಿದೆ. ಈ ಭಯದಲ್ಲಿ ಖಾತೆ ಮುಟ್ಟುಗೋಲು, ಎದುರಾಳಿಗಳ ಮುಖ್ಯಮಂತ್ರಿಗಳ ಬಂಧನ, ರಾಜ್ಯಪಾಲರ ದುರ್ಬಳಕೆ ಯತ್ನಕ್ಕೆ ಮುಂದಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಪಕ್ಷ ಕೇಂದ್ರದ ಈ ಧೋರಣೆ ಖಂಡಿಸುತ್ತದೆ.
ಬಿಜೆಪಿ ಹಾಗೂ ಮೋದಿ ಅವರು ನಮ್ಮ ಗ್ಯಾರಂಟಿಗಳನ್ನು ಕದ್ದಿದ್ದಾರೆ. ನಾವು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ ನಂತರ ಬಿಜೆಪಿಯವರು ಮಧ್ಯಪ್ರದೇಶ ಚುನಾವಣೆಯಲ್ಲಿ ನಮಗಿಂತ ಮುಂಚೆ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದರು. ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದವರು, ಈಗ ಮೋದಿ ಗ್ಯಾರಂಟಿ ಎಂದು ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿದ್ದಾರೆ.
ನಮಗೆ ಜನರ ಮೇಲೆ ವಿಶ್ವಾಸವಿದೆ. ನಾವು ಮಾಧ್ಯಮಗಳ ಮೂಲಕ ನಮ್ಮ ವಿಚಾರವನ್ನು ಜನರಿಗೆ ತಿಳಿಸಬೇಕಿದೆ. ಮಾಧ್ಯಮಗಳು ಪ್ರಜಾಪ್ರಭುತ್ವದ ಆಧಾರಸ್ತಂಭ. ನೀವು ನಮ್ಮ ಹಾಗೂ ಜನರ ಮಧ್ಯೆ ಸಂಪರ್ಕ ಕೊಂಡಿಯಾಗಿದ್ದೀರಿ. ನಮ್ಮ ಸಂದೇಶಗಳನ್ನು ಜನರಿಗೆ ನೀವು ತಲುಪಿಸಬೇಕು.”
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ