ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರಾದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಅಪ್ಪಾಜಿಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಯೋಗೇಶ್, ಮಂಜುನಾಥ್ ಗೌಡ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಆಶಾ ಸುರೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಸಚಿವರಾದ ಚೆಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಬಿ.ಕೆ ಹರಿಪ್ರಸಾದ್, ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ ಗೌಡ (ಸ್ಟಾರ್ ಚಂದ್ರು), ಶಾಸಕರಾದ ಉದಯ್, ರವಿ ಗಣಿಗ, ಎಂಎಲ್ಸಿ ದಿನೇಶ್ ಗೂಳಿಗೌಡ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಮಾತನಾಡಿದರು.
ಇದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, *BJP ಗೆ ಪ್ರಜಾತಂತ್ರ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಸರ್ವಾಧಿಕಾರದಲ್ಲಿ ಮಾತ್ರ ನಂಬಿಕೆ ಇದೆ ಎಂದರು.
ಸೋಲಿನ ಭಯದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಬಿಜೆಪಿ ಸೀಜ್ ಮಾಡಿದೆ. ಈ ಬಾರಿ ಬಿಜೆಪಿಯನ್ನು ದೇಶದ ಜನ ಸ್ಪಷ್ಟವಾಗಿ ತಿರಸ್ಕರಿಸಿ ಭಾರತವನ್ನು ಉಳಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಬ್ರಿಟೀಷರನ್ನು ಭಾರತದಿಂದ ಓಡಿಸಲು ಸುದೀರ್ಘ ಹೋರಾಟ ನಡೆಸಿ ಹುತಾತ್ಮರಾದ, ಜೈಲು ಸೇರಿದ ಚರಿತ್ರೆ ಇರುವ ಪಕ್ಷ ಕಾಂಗ್ರೆಸ್. ಬಿಜೆಪಿ ನಮಗೆ ಎಷ್ಟೇ ತೊಂದರೆ ಕೊಟ್ಟರೂ ಕಾಂಗ್ರೆಸ್ ಕಾರ್ಯಕರ್ತರು ಹೋರಾಟದ ಹಾದಿಯಲ್ಲೇ ಎಲ್ಲವನ್ನೂ ಎದುರಿಸಲಿದ್ದಾರೆ ಎಂದರು.
ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯ ಅಂತಿಮ. ಕಾಂಗ್ರೆಸ್ ಜನರಿಂದ ಹಣ ಸಂಗ್ರಹಿಸಿದೆ. ಜನರು ಸ್ವಯಂಪ್ರೇರಿತವಾಗಿ ಕೊಟ್ಟ ಹಣ ಕಾಂಗ್ರೆಸ್ ಖಾತೆಯಲ್ಲಿತ್ತು. ಸಣ್ಣ ತಾಂತ್ರಿಕ ಕಾರಣ ನೀಡಿ ಇಡೀ ಖಾತೆಯನ್ನು ಸೀಜ್ ಮಾಡಿರುವುದು ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣೆ ನಡೆಸದಂತೆ ಬಿಜೆಪಿ ಈ ರೀತಿಯ ತೊಂದರೆ ಕೊಡುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಇದು ಖಂಡನೀಯ ಎಂದರು.
*ಮನುಸ್ಮೃತಿಯ ಮಾರಕ ಮನಸ್ಥಿತಿ*
ಬಿಜೆಪಿ ಮನುಸ್ಮೃತಿಯ ಮಾರಕ ಮನಸ್ಥಿತಿಯನ್ನು ಹೊಂದಿದೆ. ಹೀಗಾಗಿ ಬಿಜೆಪಿಗೆ ಅಸಮಾನತೆ ಇರಬೇಕು, ಜಾತಿ ವ್ಯವಸ್ಥೆ ಗಟ್ಟಿಯಾಗಬೇಕು, ನಿರುದ್ಯೋಗ ಹೆಚ್ಚಾಗಬೇಕು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಬಾರದು. ಈ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಬಾರದು ಎನ್ನುವ ಮನಸ್ಥಿತಿ ಬಿಜೆಪಿಯದ್ದಾಗಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹಣ ಇಲ್ಲದಂತೆ ಮಾಡಲು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ ಎಂದರು.
ಸಿಎಎ, ಪುಲ್ವಾಮಾ, ಅಯೋಧ್ಯೆ ಹೆಸರಲ್ಲಿ ಇನ್ನೂ ಎಷ್ಟು ವರ್ಷ ಭಾರತೀಯರನ್ನು ಭಾವನಾತ್ಕವಾಗಿ ಮರಳು ಮಾಡ್ತೀರಿ? ಜನರ ಬದುಕಿನ ಸಮಸ್ಯೆಗಳಿಗೆ ನೆಪಕ್ಕೂ ಸ್ಪಂದಿಸದ ನೀವು ಕೇವಲ ಭಾವನಾತ್ಮಕವಾಗಿ ಕೆರಳಿಸುತ್ತಾ ಇದ್ದೀರಿ. ಆದರೆ ಭಾರತದ ಜನತೆ ನಿಮ್ಮನ್ನು ಈ ಬಾರಿ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದರು.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ