*ನರೇಗಾ ಯೋಜನೆ ಕೇಂದ್ರ ಸರ್ಕಾರ ನಿರ್ನಾಮ ಮಾಡಲು ಹೋರಟಿದೆ; ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನ್ ರೇಗಾ ಯೋಜನೆಯನ್ನು ಕೇವಲ ಬದಲಾಯಿಸುತ್ತಿಲ್ಲ. ಅದನ್ನು ನಿರ್ನಾಮ ಮಾಡಲು ಕೇಂದ್ರ ಸರ್ಕಾರ ಹೊರಟಿದ್ದು, ಇದಕ್ಕೆ ನಾವು ಅವಕಾಶ ಕೊಡಲ್ಲ ಎಂದು ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಎಚ್ಚರಿಕೆಯನ್ನು ನೀಡಿದ್ದಾರೆ.

ರವಿವಾರ ಬೆಳಗಾವಿಯ ಕಾಂಗ್ರೆಸ್ ಭವನದ ಮುಂದೆ ಮನರೇಗಾ ಬಚಾವೋ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಕೆಲಸವನ್ನು ಕಿತ್ತುಕೊಳ್ಳಲೆಂದೇ ಮನರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಇದರ ವಿರುದ್ಧ ರಸ್ತೆಗಿಳಿದು ಕಾಂಗ್ರೆಸ್ ಪ್ರತಿಭಟಿಸಲಿದೆ. ಮನರೇಗಾ ಯೋಜನೆಯ ಅಧಿಕಾರ ಗ್ರಾಮ ಪಂಚಾಯಿತಿಗಳಿಗಿತ್ತು. ಈಗ ಅದನ್ನು ಕೂಡ ಕಸಿದುಕೊಂಡು ದೆಹಲಿಗೆ ತೆಗೆದುಕೊಂಡು ಹೋಗಲಾಗಿದೆ.
ಇದರಿಂದ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರಿಗೂ ಅಧಿಕಾರ ಇಲ್ಲದಂತಾಗಿದೆ. 60-40 ರ ಯೋಜನೆಯಿಂದ ರಾಜ್ಯ ಸರ್ಕಾರಗಳ ಮೇಲೆ ಹೊರೆ ಹಾಕಲಾಗುತ್ತಿದೆ. ಯೋಜನೆಯನ್ನು ಅವರು ಬದಲಿಸುತ್ತಿಲ್ಲ. ಯೋಜನೆಯನ್ನು ಮುಗಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ, ಗ್ರಾಮೀಣ ಅಭಿವೃದ್ಧಿಗಾಗಿ ಜಾರಿಗೆ ಮಾಡಲಾದ ಮನರೇಗಾ ಯೋಜನೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ. ಮಹಾತ್ಮಾ ಗಾಂಧೀಜಿಯವರ ಹೆಸರು ಅಳಿಸುವ ಯತ್ನ ಬಿಜೆಪಿಗೆ ಮಾಡುತ್ತಿದೆ. ವಿಶ್ವವೇ ಗಾಂಧೀಜಿ ಅವರಿಗೆ ತಲೆಬಾಗಿದೆ, ಆದರೆ, ಕೇಂದ್ರ ಸರ್ಕಾರ ಆಡಳಿತವನ್ನು ಇಟ್ಟಕೊಂಡು ಅಗೌರವ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸ್ವರೂಪವನ್ನೇ ಮಾರ್ಪಾಡು ಮಾಡುವ ಮೂಲಕ ಗ್ರಾಮೀಣ ಬಡವರ ಅನ್ನ ಕಿತ್ತುಕೊಳ್ಳುತ್ತಿದೆ ಎಂದು ಅಸಮಾದಾನ ಹೊರಹಾಕಿದರು.

ಶಾಸಕರಾದ ಮಹಾಂತೇಶ ಕೌಜಲಗಿ ಅವರು ಮಾತನಾಡಿ, ಬಡವರಿಗೆ ಬೆಳಕಾಗಿರುವ ಯೋಜನೆಗೆ ಕೇಂದ್ರ ಸರ್ಕಾರ ಕತ್ತಲೆಗೆ ದೂಡುತ್ತಿದೆ. ಮನರೇಗಾದಿಂದ ಗ್ರಾಮಗಳು ಅಭಿವೃದ್ಧಿಯಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ರಾಪಂಗಳಿಗೆ ಶಕ್ತಿ ತುಂಬುವ ಕೆಲಸವಾಗಿದೆ. 100 ದಿನಗಳ ಕಾಲ ಬಡವರಿಗೆ ಕೆಲಸ ನೀಡುವ ಮಹತ್ವದ ಕಾರ್ಯವನ್ನು ಕಾಂಗ್ರೆಸ್ ನಿಂದ ಮಾಡಿತ್ತು. ಕೇಂದ್ರ ಸರ್ಕಾರವು ಮಾಡುವ ಉದ್ದೇಶವೇ ಬೇರೆ ಇದೆ. ಎಲ್ಲಾ ರಾಜ್ಯ ಸರ್ಕಾರಗಳಿಗೆ ಹಣದ ಸಮಸ್ಯೆ ಮಾಡುವುದೇ ಇವರ ಉದ್ದೇಶವಾಗಿದೆ. ಪ್ರತಿ ಗ್ರಾಮಗಳಲ್ಲಿ ಜಾಗೃತ ಕಾರ್ಯ ಮಾಡೋಣ. ನಮಗೆ ನ್ಯಾಯ ಸಿಗೋವರೆಗೂ ಹೋರಾಟ ನಡೆಸಲಾಗುವುದು. ಈ ದೇಶದಲ್ಲಿ ನಾವು ಸ್ವಚ್ಚತೆ ಮತ್ತು ಸ್ವಾವಲಂಬನೆ ಬದುಕು ನಡೆಸಬೇಕು ಎಂದು ಕರೆ ಕೊಟ್ಟರು.
ಶಾಸಕರಾದ ಬಾಬಾ ಸಾಹೇಬ ಪಾಟೀಲ್ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗಾಗಿ ಮನರೇಗಾ ಮುಂದುವರೆಯಬೇಕು. ಮಹಿಳೆಯರಿಗೆ, ಬಡವರಿಗೆ ಆಸರೆ ಆಗಬೇಕಿದ್ದ ಮನರೇಗಾ ಗಾಂಧಿಜಿ ಕನಸನ್ನು ಅಳಿಸುವ ಯತ್ನ ಬಿಜೆಪಿ ಮಾಡುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಮೃಣಾಲ್ ಹೆಬ್ಬಾಳಕರ್ ಮಾತನಾಡಿ, ಬಡವರಿಗೆ ಅನುಕೂಲಕ್ಕಾಗಿ ಕಾಂಗ್ರೆಸ್ ಪಕ್ಷ ಮನರೇಗಾ ಜಾರಿಗೆ ತಂದಿದೆ. ಮನಮೋಹನ್ ಸಿಂಗ್ ಕನಸಿನ ಯೋಜನೆಯನ್ನು ಬಿಜೆಪಿ ಅಳಿಸುವ ಯತ್ನ ಮಾಡುತ್ತಿದೆ. ಮನದಲ್ಲಿ ಶ್ರೀರಾಮನನ್ನು ಪೂಜಿಸುತ್ತೆವೆ. ಹೊರತು ಯಾವತ್ತೂ ರಾಜಕೀಯವಾಗಿ ಬಳಿಸಿಲ್ಲ, ಅದನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಬಡವರ ಹೊಟ್ಟೆ ಮೇಲೇ ಹೊಡೆಯುವ ಯತ್ನ ಬಿಜೆಪಿ ಮನಸ್ಥಿತಿ ಆಗಿದೆ ಎಂದರು.
ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ ಅವರು ಮಾತನಾಡಿ, ಮನರೇಗಾ ಬದಲಾವಣೆ ಮಾಡಲು ಬಿಜೆಪಿಗೆ ಯಾವ ಅನೈತಿಕತೆ ಇದೆ. ದೇಶದ ಅಭಿವೃದ್ಧಿಗಾಗಿ ಮನರೇಗಾ ಮಾಡಲಾಗಿದೆ. ಆದರೆ, ಇವರಿಗೆ ಯಾವುದೇ ಅರ್ಹತೆ ಇದೆ, ದೇಶವನ್ನು ಖಾಸಗೀಕರಣ ಮಾಡಿ, ಮಾರಲು ಬಿಜೆಪಿಗರು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಬಿಡೊದಿಲ್ಲ ಸಿಎಂ ನೇತೃತ್ವದಲ್ಲಿ ಬೃಹತ್ ಜಾಗೃತಿ ನಡೆಸಲಾಗುವುದು ಎಂದರು. ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ಇರಬೇಕು. ಗಾಂಧಿಯನ್ನು ಹತ್ಯೆಗೈದ ವ್ಯಕ್ತಿಯನ್ನು ಪೂಜಿಸುವ ಮನಸ್ಥಿತಿ ಬಿಜೆಪಿಯಲ್ಲಿದೆ ಎಂದು ಕಿಡಿ ಕಾರಿದರು.
ಶಾಸಕರಾದ ವಿಶ್ವಾಸ ವೈದ್ಯ ಮಾತನಾಡಿ, ಬಡವರ , ದೀನದಲಿತರ, ಅಸಹಾಯಕರಿಗೆ ಕಣ್ಣಿರು ಒರೆಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತ ಅವಧಿಯಲ್ಲಿನ ಮನರೇಗಾ ಯೋಜನೆ ತೆಗೆದು ಹಾಕಿ, ರಾಮ ಜಿ ಮಾಡಲು ಬಿಜೆಪಿ ಮಾಡುತ್ತಿದೆ. ಇದಕ್ಕೆ ಬ್ರೇಕ್ ಹಾಕುವ ಕೆಲಸ ಮಾಡೋಣ ಎಂದರು.
ವೇದಿಕೆಯ ಮೇಲೆ ಬೆಳಗಾವಿ ಉತ್ತರ ಶಾಸಕರಾದ ಆಸೀಫ್ ಸೇರ್, ವಿಶ್ವಾಸ ವೈದ್ಯ, ಮಹಾಂತೇಶ್ ಕೌಜಲಗಿ, ಬಾಬಾಸಾಹೇಬ್ ಪಾಟೀಲ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕಾಡಾ ಅಧ್ಯಕ್ಷ ಯುವರಾಜ್ ಕದಮ್, ರಾಹುಲ್ ಜಾರಕಿಹೊಳಿ, ಮೃಣಾಲ್ ಹೆಬ್ಬಾಳಕರ್, ವೀರಕುಮಾರ ಪಾಟೀಲ್, ವಿನಯ ನಾವಲಗಟ್ಟಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.




