Latest

ಕೋವಿಡ್ ನಿಯಂತ್ರಣಕ್ಕೆ ರಾಜ್ಯದ ಕ್ರಮಕ್ಕೆ ಕೇಂದ್ರ ತಂಡದ ಮೆಚ್ಚುಗೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಭೇಟಿಯಾದ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ತಂಡವು ರಾಜ್ಯದ ಕೋವಿಡ್ ನಿರ್ವಹಣೆಯ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಪರ ಕಾರ್ಯದರ್ಶಿ ಆರ್ತಿ ಅಹುಜಾ ಹಾಗೂ ತುರ್ತು ವೈದ್ಯಕೀಯ ಸ್ಪಂದನಾ ಕೇಂದ್ರದ ನಿರ್ದೇಶಕ ಡಾ. ರವೀಂದ್ರನ್ ಅವರು ರಾಜ್ಯಕ್ಕೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಂಪರ್ಕಿತರ ಪತ್ತೆ ಹಚ್ಚುವುದು ಹಾಗೂ ಕೊ-ಮಾರ್ಬಿಡ್ ವ್ಯಕ್ತಿಗಳನ್ನು ಗುರುತಿಸಿ, ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಈ ತಂಡ ಪ್ರಶಂಸೆ ವ್ಯಕ್ತಪಡಿಸಿತು.

ಮುಂದಿನ ದಿನಗಳಲ್ಲಿ, ಕೋವಿಡ್ ನಿಂದ ಉಂಟಾಗುವ ಮರಣವನ್ನು ತಡೆಗಟ್ಟಲು ಹಾಗೂ ರೋಗ ಲಕ್ಷಣ ಇರುವ ಸೋಂಕಿತರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕಾಗಿದೆ. ಜೊತೆಗೆ ಕಂಟೇನ್ ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯಾಗಬೇಕಾಗಿದೆ ಎಂದು ಕೇಂದ್ರ ತಂಡದ ಅಧಿಕಾರಿಗಳು ಸಲಹೆ ನೀಡಿದರು.

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೈ ಫ್ಲೋ ಆಕ್ಷಿಜನ್ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ಆಗಸ್ಟ್ 15 ರೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು..

Home add -Advt

ಸಭೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button