ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಲವು ಮೂಲಭೂತ ಸಂಘಟನೆಗಳು ಶಾಂತಿ ಕದಡುವ ಯತ್ನವನ್ನು ನಿರಂತರವಾಗಿ ಮಾಡುತ್ತಿವೆ. ಆರೋಪಿಗಳ ಎಲ್ಲಾ ಪ್ರಯತ್ನ ಕೂಡ ವ್ಯರ್ಥ ಪ್ರಯತ್ನ. ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ. ಅವರು ಏನೇ ಮಾಡಿದರೂ ರಾಷ್ಟ್ರ ಕಟ್ಟುವ ನಮ್ಮ ಕೆಲಸ ನಿಲ್ಲುವುದಿಲ್ಲ. ಯಾವ ಬೆದರಿಕೆಗೂ ಬಗ್ಗುವ ಜೀವ ನಮ್ಮದಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ಸಿಎಎ ಪರ ಜನಜಾಗೃತಿ ವೇಳೆ ತಮ್ಮ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಅಂದು ಟೌನ್ ಹಾಲ್ ನಲ್ಲಿ ನಡೆದ ಜಾಥಾದಲ್ಲಿ ನಾನೂ ಭಾಗಿಯಾಗಿದ್ದೆ. ಕೆಲ ಸಮಯದಲ್ಲೇ ದೊಡ್ಡ ಗಾತ್ರದ ಕಲ್ಲು ಬಂದು ನನ್ನ ಮೇಲೆ ಬಿತ್ತು. ನನ್ನ ಪ್ರಕಾರ ಆರೋಪಿಗಳು ಮೊದಲೇ ತಯಾರಿ ನಡೆಸಿಕೊಂಡು ಬಂದಿದ್ದರು. ಆದರೆ ಅಂದು ನನಗೆ ಏನೂ ಮಾಡಲು ಆಗಲಿಲ್ಲ. ಆರೋಪಿಗಳು ನಮ್ಮವರ ನಡುವೆ ಇದ್ದುಕೊಂಡು ಪ್ಲಾನ್ ಮಾಡಿ ಈ ರೀತಿ ಮಾಡಿದ್ದಾರೆ. ಆದರೆ ಕೊಲ್ಲುವವರಿಗಿಂತ ಕಾಯುವವನು ದೊಡ್ಡವನು. ಈ ಬಗ್ಗೆ ನಾನು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರಿಗೆ ತಿಳಿಸಿದ್ದೆ. ಅವರು ನನಗೆ ಸಹಕರಿಸಿ ನನ್ನ ಮನೆ, ಕಚೇರಿಗೆ ಭದ್ರತೆ ಒದಗಿಸಿದ್ದರು ಎಂದು ಹೇಳಿದರು.
ಇಂತಹ ನೂರಾರು ಎಸ್‍ಡಿಪಿಐ ಸಂಘಟನೆಗಳನ್ನು ಭಾರತ ನೋಡಿದೆ. ಕೊಲ್ಲಬೇಕೆನ್ನುವ ಮಾನಸಿಕತೆ ಇರುವುದು ಕ್ರಿಮಿನಲ್ ಸಂಗತಿ. ಇಂತಹ ಮನಸ್ಥಿತಿ ಇರುವವರನ್ನು ನಿಷೇಧಿಸುವುದು ಅಗತ್ಯ. ಕರ್ನಾಟಕ ತುಂಬಾ ಶಾಂತಿಯುತವಾದ ಜಾಗ. ನಮ್ಮ ರಾಜ್ಯವನ್ನು ಕ್ರಿಮಿನಲ್ ಮನಸ್ಥಿತಿ ಇರುವವರ ನಾಡಾಗಲು ಬಿಡಬಾರದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ