ಸರ್ಕಾರಕ್ಕೆ ಸವಾಲ್ ! ಕೇಂದ್ರದಿಂದ ಒಂದು ಪೈಸೆ ಪರಿಹಾರವಿಲ್ಲ ?
ಪ್ರಗತಿವಾಹಿನಿ ಸುದ್ದಿ – ಬೆಂಗಳೂರು : ಸಂಪೂರ್ಣ ಜಲಾವೃತ ಗೊಂಡಿದ್ದು, ಸಾಂಕ್ರಾಮಿಕ ರೋಗ, ಹಾವು, ಮೊಸಳೆ ಭಯದಿಂದ ಜನರು ತಮ್ಮ ಹಳ್ಳಿಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ.
ಈ ನಡುವೆ ಪ್ರವಾಹ ಹಾನಿಗೆ ಸಂಬಂಧಿಸಿದಂತೆ 17 ಜಿಲ್ಲೆಗಳ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಆಸ್ತಿಪಾಸ್ತಿ ಸೇರಿದಂತೆ ರೂ. 50 ಸಾವಿರ ಕೋಟಿಗಿಂತ ಹೆಚ್ಚು ನಷ್ಟ ಸಂಭವಿಸಿದೆ. ಕೇಂದ್ರದಿಂದ ಇದುವರೆಗೂ ಒಂದು ಬಿಡಿಗಾಸೂ ಪರಿಹಾರ ಸಿಕ್ಕಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂದು ಹೋಗಿದ್ದೆಷ್ಟೋ ಅಷ್ಟೇ…. ಯಾವುದೇ ಸಹಾಯದ ಭರವಸೆ ಇಲ್ಲದೆ ಜನರ ತಾಳ್ಮೆ ಕೆಡುತ್ತಿದೆ, ಪರಿಸ್ಥಿತಿ ಹದಗೆಟ್ಟಿದೆ.
ಜೀವ ಕೈಯಲ್ಲಿ ಹಿಡಿದು, ಸಹಾಯದ ದಾರಿ ಕಾಣುತ್ತಿರುವ ಲಕ್ಷಾಂತರ ಜನರ ಭವಿಷ್ಯ ಇನ್ನೂ ಕತ್ತಲೆಯಾಗಿದೆ. ಮುಂದಿನ ವಾರದಲ್ಲಿ ಕರಾವಳಿ ಪ್ರದೇಶದ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪ್ರವಾಹ ಸಂಭವಿಸಿದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರ ನಿರಂತರ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡುತ್ತಿದ್ದು ಸಾರ್ವಜನಿಕರಿಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಮಂಗಳವಾರದ ವೇಳೆಗೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ 48 ಕ್ಕೆ ತಲುಪಿದೆ ಎಂದು ಸರ್ಕಾರಿ ಮೂಲಗಳು ಅಧಿಕೃತವಾಗಿ ಪ್ರಕಟಿಸಿವೆ.
ಇನ್ನೂ 16 ಮಂದಿ ಸುಳಿವಿಲ್ಲ. 2,738 ಗ್ರಾಮಗಳು ಇನ್ನೂ ನೀರಿನ ಅಡಿಯಲ್ಲಿವೆ ಮತ್ತು 41,915 ಮನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಹಾನಿಗೊಳಗಾಗಿವೆ ಮತ್ತು 4.30 ಲಕ್ಷ ಹೆಕ್ಟೇರ್ ಪ್ರವಾಹಕ್ಕೆ ಸಿಲುಕಿದೆ ಎಂದು ತಿಳಿಸಿದೆ. ರಾಜ್ಯದಲ್ಲಿ ಭಾರಿ ಮಳೆ ಮತ್ತು ಪ್ರವಾಹ ಪ್ರಾರಂಭವಾದಾಗಿನಿಂದ 6.80 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಅವರಿಗೆ 1,124 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ, ಜಿಲ್ಲಾ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪುನರ್ವಸತಿ ಕಾರ್ಯಕ್ರಮಗಳು ಸರ್ಕಾಕ್ಕೆ ಹೊರೆಯಾಗಿವೆ ಎಂಬುದರಲ್ಲಿ ಸಂದೇಹವಿಲ್ಲ. ಒಟ್ಟಿನಲ್ಲಿ ಇದು ಸರ್ಕಾರಕ್ಕೆ ಸವಾಲ್ !
ಇದೇ ವೇಳೆ, ಸರಕಾರ ಬುಧವಾರ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಜಾಹಿರಾತಿಗೆ ಕಾಂಗ್ರೆಸ್ ಟೀಕಿಸಿದೆ. ಪ್ರವಾಹ ಪರಿಹಾರಕ್ಕೆ ಸರಕಾರದ ಬಳಿ ದುಡ್ಡಿಲ್ಲ, ಆದರೆ ಜಾಹಿರಾತಿಗೆ ದುಡ್ಡಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ