ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಯಲ್ಲಿ ಸಾವನ್ನಪ್ಪಿದ ರೋಗಿಗಳ ಸಂಖ್ಯೆ 24. ಈ ದುರಂತ ವೇದನೆ ತಂದಿದೆ. ಆದರೆ ಎಲ್ಲರೂ ಆಕ್ಸಿಜನ್ ಕೊರತೆಯಿಂದಲೇ ಸಾವನ್ನಪ್ಪಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿರುವುದು ರಾತ್ರಿಯಿಂದ ಆದರೆ 24 ಗಂಟೆಯಲ್ಲಿ 24 ರೋಗಿಗಳು ಸಾವನ್ನಪ್ಪಿದ್ದಾರೆ. ಹಾಗಾಗಿ ಎಲ್ಲರೂ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿಲ್ಲ. ಯಾವ ಕಾರಣಕ್ಕೆ ಮೃತಟ್ಟಿದ್ದಾರೆ ಎಂಬ ಬಗ್ಗೆ ವೈದ್ಯರಿಂದ ವರದಿ ಕೇಳಿದ್ದೇವೆ. ವರದಿ ಬಂದ ಬಳಿಕ ಮಾಹಿತಿ ಸಿಗಲಿದೆ ಎಂದರು.
ನಾವು ಸುಮಾರು 80 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ್ದೇವೆ. 6,000 ಲೀಟರ್ ಲಿಕ್ವಿಡ್ ಆಕ್ಸಿಜನ್ ವ್ಯವಸ್ಥೆ ಮಾಡಿದ್ದೇವೆ. ಆದರೆ ಆಕ್ಸಿಜನ್ ಸಮಯಕ್ಕೆ ಬರದೇ ಸಮಸ್ಯೆಯಾಗಿದೆ. ನಮಗೆ ಮೈಸೂರಿನಿಂದ ಆಕ್ಸಿಜನ್ ಬರಬೇಕಿತ್ತು ಎಂದು ಹೇಳಿದರು. ಈ ದುರಂತ ವೈದ್ಯರ ಅಥವಾ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ ಕೊರೊನಾ ಸೋಂಕಿತರು ಕೊನೇ ಕ್ಷಣದಲ್ಲಿ, ವಿಷಮ ಸ್ಥಿತಿ ತಲುಪಿದಾಗ ಆಸ್ಪತ್ರೆಗೆ ದಾಖಲಾಗುತ್ತಿದದರೆ. ಇದರಿಂದ ಅವರ ಜೀವ ಉಳಿಸುವುದೂ ವೈದ್ಯರಿಗೆ ಕಷ್ಟಸಾಧ್ಯವಾಗುತ್ತಿದೆ. ಆರಂಭದಲ್ಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ ಸಾವು ನೋವು ಸಂಭವಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ