
ಪ್ರಗತಿವಾಹಿನಿ ಸುದ್ದಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಚಂದ್ರಶೇಖರ್ ಸಿದ್ದಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಿಮನಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚಂದ್ರಶೇಖರ್ ಸಿದ್ದಿ ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದಿದ್ದರು. ನಿನಾಸಂ ನಾಟಕ ತರಬೇತಿ ಪಡೆದಿದ್ದ ಚಂದ್ರಶೇಖರ್ ಸಿದ್ದಿ ಯೋಗಪಟು ಕೂಡ ಆಗಿದ್ದರು. ಕಾಮಿಡಿ ಕಿಲಾಡಿಗಳು ಶೋ ಬಳಿಕ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು. ಅಷ್ಟೇನು ಅವಕಾಶಗಳು ಸಿಕ್ಕಿರಲಿಲ್ಲ. ಯಲ್ಲಾಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಕೆಲ ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಚಂದ್ರಶೇಖರ್ ಸಿದ್ದಿ, ನನ್ನನ್ನು ಜನ ಟಾರ್ಗೆಟ್ ಮಾಡುತ್ತಿದ್ದಾರೆ. ಆಡಿಕೊಳ್ತಿದ್ದಾರೆ. ಜೀವನ ಬೇಡ ಎನ್ನಿಸುತ್ತಿದೆ ಎಂದು ಹೇಳಿಕೊಂಡಿದ್ದರಂತೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರಂತೆ. ಎಂದಿನಂತೆ ಪತ್ನಿ ಜೊತೆ ಕೆಲಸಕ್ಕೆಂದು ಹೋಗಿದ್ದ ವೇಳೆ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.