ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಇಲ್ಲಿಗೆ ಸಮೀಪದ ಬಸಳಿಗುಂದಿ ಗ್ರಾಮದ ಸಿದ್ಧಾರೂಢ ಮಠದ ಪೀಠಾಧಿಕಾರಿ ಸದಾನಂದ ಮಹಾಸ್ವಾಮಿಗಳು(77) ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೂಲತಃ ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದವರಾಗಿದ್ದ ಸದಾನಂದ ಸ್ವಾಮಿಗಳು ಕಳೆದ 35 ವರ್ಷಗಳಿಂದ ಬಸಳಿಗುಂದಿಯ ಸಿದ್ಧಾರೂಢ ಮಠದ ಪೀಠಾಧಿಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ವಾಮೀಜಿಗಳ ನಿಧನಕ್ಕೆ ಬಸಳಿಗುಂದಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತ ಸಮೂಹ ಶೋಕ ವ್ಯಕ್ತಪಡಿಸಿದೆ. ಸ್ವಾಮೀಜಿಗಳ ಅಂತ್ಯಕ್ರಿಯೆಯು ಮಂಗಳವಾರ ಸಂಜೆ 4 ಗಂಟೆಗೆ ಬಸಳಿಗುಂದಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ನಡೆಯಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಶೋಕ : ಸದಾನಂದ ಮಹಾಸ್ವಾಮಿಗಳ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ. ಸ್ವಾಮೀಜಿಗಳ ನಿಧನದಿಂದ ನಷ್ಟವಾಗಿದೆ. ಬಸಳಿಗುಂದಿ ಸಿದ್ಧಾರೂಢ ಮಠದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು. ಬಸಳಿಗುಂದಿ ಭಾಗದ ಭಕ್ತರಲ್ಲಿ ಧಾರ್ಮಿಕ ವಾತಾವರಣವನ್ನು ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.