ಚಂದ್ರಯಾನ ಯಶಸ್ವಿ: ಭಾರತ ಬಾಹ್ಯಾಕಾಶ ಲೋಕದ ಲೀಡರ್ ಎನ್ನುವುದು ಸಾಬೀತು- ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಡೀ ವಿಶ್ವವೇ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದ ಚಂದ್ರಯಾನ ಯಶಸ್ವಿಯಾಗಿದ್ದಕ್ಕೆ ತೀವ್ರ ಹರ್ಷ ವ್ಯಕ್ತಪಡಿಸಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಇದು ಭಾರತೀಯ ವಿಜ್ಞಾನಿಗಳ ತಾಖತ್ತು. ಅವರಿಗೆ ನನ್ನ ಕೋಟಿ ಕೋಟಿ ವಂದನೆಗಳು, ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆ. ಈ ಹಿಂದೆ ಕೂಡ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ಈಗ ಚಂದ್ರಯಾನದ ಯಶಸ್ಸು ಇಡೀ ವಿಶ್ವವೇ ಭಾರತವನ್ನು ಮತ್ತೊಮ್ಮೆ ಕೊಂಡಾಡುವಂತೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಜಗತ್ತಿನ ಮೊದಲ ದೇಶವಾಗಿ ಭಾರತಕ್ಕೆ ಇಸ್ರೋ ಹೆಮ್ಮೆ ತಂದು ಕೊಟ್ಟಿದೆ. ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಮೂಲಕ ಭಾರತ ಬಾಹ್ಯಾಕಾಶ ಲೋಕದ ಲೀಡರ್ ಎನ್ನುವುದನ್ನು ತೋರಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ.
ಚಂದ್ರಯಾನದ ಈ ಯಶಸ್ಸು ವಿಜ್ಞಾನ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳಿಗೆ ಕಾರಣೀಭೂತವಾಗಲಿದೆ. ಈ ಮಹತ್ಸಾಧನೆಗಾಗಿ ಮತ್ತೊಮ್ಮೆ ಎಲ್ಲ ವಿಜ್ಞಾನಿಗಳನ್ನು, ಇಡೀ ದೇಶದ ಜನತೆಯನ್ನು ಅಭಿನಂದಿಸುತ್ತೇನೆ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.




