Belagavi NewsBelgaum NewsKannada NewsKarnataka NewsLatestUncategorized

*ಚಂದ್ರಯಾನ-3 ಯಶಸ್ಸಿ ಉಡಾವಣೆ: ಶುಕ್ರವಾರ ದೇಶದ ಜೊತೆಗೆ ಖಾನಾಪುರದ ಪಾಲಿಗೂ ಹೆಮ್ಮೆಯ ದಿನ*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಶ್ರೀಹರಿಕೋಟಾದಿಂದ ಶುಕ್ರವಾರ ಮಧ್ಯಾಹ್ನ ಚಂದ್ರಲೋಕಕ್ಕೆ ಚಂದ್ರಯಾನ-3 ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಉಪಗ್ರಹದ ಯಶಸ್ವಿ ಉಡಾವಣೆಯ ಹಿಂದೆ ಅಸಂಖ್ಯಾತ ವಿಜ್ಞಾನಿಗಳ ಅವಿರತ ಶ್ರಮ ಅಡಗಿದೆ. ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡ ಹಿನ್ನೆಲೆಯಲ್ಲಿ ಇಡೀ ದೇಶದ ಜನರು ಇಸ್ರೋ ವಿಜ್ಞಾನಿಗಳ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಈ ಉಪಗ್ರಹದ ಯಶಸ್ಸಿನ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬಂದ ಯುವ ಪ್ರತಿಭೆಯೊಬ್ಬರ ಶ್ರಮವೂ ಅಡಗಿದೆ ಎಂಬ ಸಂಗತಿ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.

ತಾಲ್ಲೂಕಿನ ಕಾಪೋಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅನಗಡಿ ಗ್ರಾಮದ ಯುವ ವಿಜ್ಞಾನಿ ಪ್ರಕಾಶ ನಾರಾಯಣ ಪೇಡಣೇಕರ 2019ರಿಂದ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶುಕ್ರವಾರ ಚಂದ್ರನೆಡೆಗೆ ಧಾವಿಸಿದ ಚಂದ್ರಯಾನ-3 ಉಪಗ್ರಹದ ಯಶಸ್ಸಿನಲ್ಲಿ ಪ್ರಕಾಶ ಅವರ ಪಾತ್ರವೂ ಅಡಗಿದೆ ಎಂಬುದು ಹೆಮ್ಮೆಯ ಸಂಗತಿ.

ಅನಗಡಿಯ 32 ವರ್ಷದ ಅಂತರಿಕ್ಷ ವಿಜ್ಞಾನಿ ಪ್ರಕಾಶ ಅವರ ತಂದೆ ಕೃಷಿಕ, ತಾಯಿ ಗೃಹಿಣಿ. ಸಧ್ಯ ಆಂಧ್ರದ ಶ್ರೀಹರಿಕೋಟಾ ಬಳಿ ವಾಸವಿರುವ ಪ್ರಕಾಶ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಕಾಶ ಅವರು ಅನಗಡಿ ಗ್ರಾಮದಲ್ಲಿ ಮರಾಠಿ ಮಾಧ್ಯಮದಲ್ಲಿ ಪ್ರಾಥಮಿಕ, ಕಾಪೋಲಿಯ ಮರಾಠಾ ಮಂಡಳ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿ ಬೆಳಗಾವಿಯ ಜಿ.ಎಸ್.ಎಸ್ ಕಾಲೇಜಿನಲ್ಲಿ ಪಿಯು ವಿಜ್ಞಾನ ಮತ್ತು ಜಿಐಟಿಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಉನ್ನತ ಶ್ರೇಣಿಯೊಂದಿಗೆ ಪಡೆದಿದ್ದಾರೆ.

ಮುಂಬೈನ ವಿವಿಡಿಪಿ ವಿಶ್ವವಿದ್ಯಾಲಯದಲ್ಲಿ ಅಂತರಿಕ್ಷದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಅವರು ಇಸ್ರೋದಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ ದಿನಗಳಿಂದಲೂ ಮೂನ್ ಮಿಷನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕಾಶ ಅವರು ಚಂದ್ರಯಾನ-2ರ ತಂಡದಲ್ಲೂ ಸೇವೆಯಲ್ಲಿದ್ದರು. ಚಂದ್ರಯಾನ-2ರ ಅಪಯಶದಿಂದ ಧೃತಿಗೆಡದ ಮೂನ್ ಮಿಷನ್ ತಂಡ ಚಂದ್ರಯಾನ-3ರ ಯಶಸ್ಸಿಗೆ ಶ್ರಮಿಸಿದ್ದು, ಎರಡರಲ್ಲೂ ಪ್ರಕಾಶ ಅವರ ಪಾಲು ಇರುವುದು ಖಾನಾಪುರಿಗರ ಪಾಲಿಗೆ ಹೆಮ್ಮೆಯ ಸಂಗತಿ.

ಪ್ರಕಾಶ ಅವರ ಪ್ರೌಢಶಾಲಾ ಶಿಕ್ಷಕ -ಸಂಜೀವ ವಾಟೂಪಕರ ಅವರು ಈ ಬಗ್ಗೆ ಸಂತಸ ಹಂಚಿಕೊಂಡಿದ್ದು, ಚಂದ್ರಯಾನ-3ರ ತಂಡದಲ್ಲಿ ನನ್ನ ಬಳಿ ವಿದ್ಯೆ ಕಲಿತ ವಿದ್ಯಾರ್ಥಿ ಪ್ರಕಾಶ ನಾರಾಯಣ ಪೇಡಣೇಕರ ಇರುವುದು ಹೆಮ್ಮೆಯ ಸಂಗತಿ. ಅನಗಡಿ ಗ್ರಾಮದ ಬಡ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದಿರುದ ಪ್ರಕಾಶ ಅವರಿಗೆ ಬಡತನದ ಬಗ್ಗೆ ಅರಿವಿದೆ. ಶಿಕ್ಷಣದ ಮಹತ್ವದ ಬಗ್ಗೆ ತಿಳಿದಿದ್ದಾರೆ. ಇದರ ಪರಿಣಾಮವೇ ಇಂದು ಅವರು ಇಡೀ ದೇಶವೇ ಗೌರವಿಸುವಂತೆ ‘ಪ್ರಕಾಶಮಾನ’ವಾದ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆ ನನಗೆ ಖುಷಿ ತಂದಿದೆ. ಇಂತಹ ಪ್ರತಿಭಾವಂತನಿಗೆ ವಿದ್ಯಾರ್ಜನೆ ಮಾಡಿದ ಶಿಕ್ಷಕ ನಾನು ಎಂಬ ಹೆಮ್ಮೆ ನನಗಿದೆ ಎಂದು ತಿಳಿಸಿದ್ದಾರೆ.

ಪ್ರಕಾಶ ಅವರ ಪಿಯು ಉಪನ್ಯಾಸಕ ಪ್ರೊ.ಭರತ ತೋಪಿನಕಟ್ಟಿ, ಜಿ.ಎಸ್.ಎಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಎರಡು ವರ್ಷ ವ್ಯಾಸಂಗ ಮಾಡಿರುವ ಪ್ರಕಾಶ ಪೇಡಣೇಕರ ಅವರಂತಹ ಪ್ರತಿಭಾನ್ವಿತ ವಿದ್ಯಾರ್ಥಿ ಇಂದು ಇಡೀ ರಾಷ್ಟ್ರ ಗುರುತಿಸುವ ಸಾಧನೆ ಮಾಡಿದ್ದು ಒಬ್ಬ ಗುರುವಾಗಿ ಖುಷಿ ತಂದಿದೆ. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿ ಮರಾಠಿ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ ವಿಜ್ಞಾನ ವಿಭಾಗದಲ್ಲಿ ಪಿಯು ಕಲಿಯಲು ನಮ್ಮ ಕಾಲೇಜಿಗೆ ದಾಖಲಾಗಿದ್ದ ಪ್ರಕಾಶ ವಿದ್ಯಾರ್ಥಿ ಜೀವನದಲ್ಲಿ ನಿಜಕ್ಕೂ ಪ್ರತಿಭಾವಂತನಾಗಿದ್ದ. ಕಷ್ಟಪಟ್ಟು ಇಂಗ್ಲೀಷ್ ಕಲಿತು ಪಿಯು ಶಿಕ್ಷಣ ಪೂರೈಸಿದ್ದ. ಅವನೂ ನನ್ನ ತಾಲ್ಲೂಕಿನವನೇ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತಿದೆ. ಸಾಧಕ ಪ್ರಕಾಶನಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button