

ಮಿನಿ ವಿಧಾನಸೌಧಗಳಿನ್ನು ಪ್ರಜಾಸೌಧಗಳಾಗಿ ಬದಲಾವಣೆ: ಡಿಸಿಎಂ ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ, ಕಲಬುರಗಿ :
“ತಾಲೂಕು ಕೇಂದ್ರಗಳು ಸೇರಿದಂತೆ ಎಲ್ಲೆಲ್ಲಿ ಮಿನಿ ವಿಧಾನಸೌಧಗಳಿವೆ ಅವುಗಳ ಹೆಸರನ್ನು ಪ್ರಜಾಸೌಧಗಳು ಎಂದು ಬದಲಾವಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು
ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, “ಈ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಹಾಗೂ ಆಡಳಿತ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗುವುದು” ಎಂದು ತಿಳಿಸಿದರು.
ಸೆ.22 ರಂದು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ:
“ಇದೇ ಸೆಪ್ಟೆಂಬರ್ 22 (ಭಾನುವಾರದಂದು) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು” ಎಂದು ತಿಳಿಸಿದರು.
“ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅನ್ನು ಕೇವಲ ಐದು ದಿನಗಳಲ್ಲಿ ಮರು ಸ್ಥಾಪಿಸಿ, ನೀರನ್ನು ಹಾಗೂ ರೈತರನ್ನು ಉಳಿಸಿದ್ದೇವೆ. ಗೇಟ್ ದುರಸ್ತಿಗೆ ಶ್ರಮಿಸಿದ ಎಲ್ಲ ಅಧಿಕಾರಿಗಳು, ಇಂಜಿನಿಯರು ಹಾಗೂ ಕಾರ್ಮಿಕರು ಸೇರಿ ಸುಮಾರು 108 ಜನರಿಗೆ ಅಂದು ಸತ್ಕರಿಸಿ, ಗೌರವಿಸಲಾಗುವುದು” ಎಂದು ತಿಳಿಸಿದರು.
“ಇಷ್ಟೊತ್ತಿಗಾಗಲೇ ನಾವು ಗಂಗೆ ಪೂಜೆ ಮಾಡಿ ಬಾಗಿನ ಅರ್ಪಿಸಬೇಕಾಗಿತ್ತು. ನಾನು ಒಂದು ವಾರ ವಿದೇಶದಲ್ಲಿ ಇದ್ದ ಕಾರಣ ಇದು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳು ನೀವು ಬಂದ ಮೇಲೆ ಬಾಗಿನ ಅರ್ಪಿಸೋಣ ಎಂದು ಹೇಳಿದ್ದರು” ಎಂದರು.
ಮಹಾನಗರ ಪಾಲಿಕೆಗಳಾಗಿ ರಾಯಚೂರು ಮತ್ತು ಬೀದರ್ ಘೋಷಣೆ
“ಆಡಳಿತ ವಿಕೇಂದ್ರೀಕರಣದ ಭಾಗವಾಗಿ ರಾಯಚೂರು ಮತ್ತು ಬೀದರ್ ಅನ್ನು ಮಹಾನಗರ ಪಾಲಿಕೆಗಳನ್ನಾಗಿ ಘೋಷಣೆ ಮಾಡಲಾಗುತ್ತಿದೆ. ಬೀದರ್ ಜಿಲ್ಲಾ ಕೇಂದ್ರದಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ, ಒಂದು ಲಕ್ಷದ ಇಪ್ಪತ್ತು ಸಾವಿರ ಚದರ ಅಡಿ ವಿಸ್ತೀರ್ಣದ ಜಿಲ್ಲಾ ಆಡಳಿತ ಸೌಧವನ್ನು ಪೂರ್ಣಗೊಳಿಸಲು ಸರ್ಕಾರ ಪಣ ತೊಟ್ಟಿದೆ. ಕಲ್ಯಾಣ ಕರ್ನಾಟಕದ ಪ್ರತಿ ಜಿಲ್ಲೆಗಳ 20ರಷ್ಟು ಭೂಭಾಗವನ್ನು ಅರಣ್ಯೀಕರಣ ಮಾಡಲಾಗುವುದು” ಎಂದರು.
ಅನುಭವ ಮಂಟಪದಿಂದ ಅಂಜನಾದ್ರಿ ಬೆಟ್ಟದ ತನಕ ಪ್ರವಾಸೋದ್ಯಮ ಅಭಿವೃದ್ಧಿ
ಅನುಭವ ಮಂಟಪದಿಂದ ಅಂಜನಾದ್ರಿ ಬೆಟ್ಟದ ತನಕ ಇರುವ ಎಲ್ಲಾ ಸ್ಮಾರಕಗಳನ್ನು ಅಭಿವೃದ್ಧಿಪಡಿಸಲಾಗುವುದು. ಸಚಿವರಾದ ಎಚ್ ಕೆ ಪಾಟೀಲ್ ಅವರು ಪ್ರವಾಸೋದ್ಯಮದ ವಿಚಾರವಾಗಿ ಸಲ್ಲಿಸಿದ ಎಲ್ಲಾ ಪ್ರಸ್ತಾವನೆಗಳನ್ನು ಅಂಗೀಕರಿಸಲಾಗಿದೆ. ಈ ಸ್ಮಾರಕಗಳ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದರು.
“ಅಕ್ಷರ, ಆವಿಷ್ಕಾರ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಈ ಭಾಗದಲ್ಲಿ ಬಂಡವಾಳ ಆಕರ್ಷಣೆಗೆ ಒತ್ತು ನೀಡಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ವಸತಿ ಯೋಜನೆ, ಆಶ್ರಯ ಮತ್ತು ಆರೋಗ್ಯ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಾಗುವುದು” ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ಭರ್ತಿ ಬಗ್ಗೆ ಕೇಳಿದಾಗ “ಈ ವಿಚಾರದಲ್ಲೂ ಸರ್ಕಾರ ಹಂತ ಹಂತವಾಗಿ ಕ್ರಮ ತೆಗೆದುಕೊಳ್ಳುತ್ತಿದೆ. ನಮ್ಮ ಕಡೆಗಿಂತ ಈ ಭಾಗದಲ್ಲಿ ಹೆಚ್ಚು ಕೆಲಸಗಳು ಬೇಗ ಆಗುತ್ತಿವೆ” ಎಂದರು.
ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಉದ್ಯೋಗ ಮೀಸಲಾತಿ ಸಮಸ್ಯೆ ಬಗ್ಗೆ ಕೇಳಿದಾಗ “ಈಗಾಗಲೇ ಸರ್ಕಾರ ಕ್ರಮ ತೆಗೆದುಕೊಂಡಿದೆ. ಒಂದಷ್ಟು ತಾಂತ್ರಿಕ ಅಡಚಣೆಗಳನ್ನು ನಿವಾರಿಸಿದೆ” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ