ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಕ್ಟೋಬರ್ ೨೩, ಕಿತ್ತೂರು ಸಂಸ್ಥಾನದ ವಿಜಯೋತ್ಸವವೇ ಹೊರತು ಅದು ರಾಣಿ ಚನ್ನಮ್ಮಳ ಜಯಂತ್ಯುತ್ಸವವಲ್ಲ. ವಿಜಯೋತ್ಸವದ ದಿನದಂದೆ ಕಿತ್ತೂರು ಉತ್ಸವವು ನಡೆದಿರುವುದು ಸ್ಥಳೀಯರಿಗೆ ಸಂತೋಷವನ್ನು ತಂದಿದೆ. ಆದರೆ ನವೆಂಬರ ೧೪ರಂದು ಚನ್ನಮ್ಮಳ ಜಯಂತಿಯನ್ನು ಆಚರಿಸಬೇಕು ಎಂದು ಹಿರಿಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಯ. ರು. ಪಾಟೀಲರು ಅಭಿಪ್ರಾಯಪಟ್ಟರು.
ಅವರು ವಿಶ್ವವಿದ್ಯಾಲಯದ, ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಅಧ್ಯಯನ ಪೀಠಗಳ ವತಿಯಿಂದ ಕಿತ್ತೂರು ವಿಜಯೋತ್ಸವದ ಮುನ್ನಾದಿನ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.
ಕಿತ್ತೂರು ಸಂಸ್ಥಾನದ ತ್ಯಾಗ, ರಾಷ್ಟ್ರಪ್ರೇಮಗಳ ಚರಿತ್ರೆಗೆ ರೋಚಕ ಇತಿಹಾಸವಿದೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನ ರಾಣಿ ಚನ್ನಮ್ಮ ಸ್ವಾಭಿಮಾನದಿಂದ ಹಾಗೂ ರಾಷ್ಟ್ರೀಯತೆಯ ದ್ಯೋತಕವಾಗಿ ತನ್ನ ಪ್ರಾಣದ ಹಂಗನ್ನು ತೊರೆದು ರಣರಂಗದಲ್ಲಿ ಕಲಿಯಂತೆ ಹೋರಾಡಿದಳು. ಅವರ ಕಲಿತನ, ಸ್ವಾಭಿಮಾನ ಹಾಗೂ ಸ್ವಾತಂತ್ರ್ಯ ಪ್ರೇಮವು ನಮಗಿಂದು ಪ್ರೇರಣೆಯಾಗಿದೆ. ಅವರ ಹೆಸರಿನಿಂದಲೇ ಆರಂಭವಾದ ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳಿಗೆ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರು ಪ್ರೇರಣೆಯಾಗಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಅಧ್ಯಯಿನಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅವರುಗಳ ಜೀವನಗಾಥೆಯು ತಿಳಿದಿರಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪೀಠಗಳ ಅಧ್ಯಕ್ಷರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಮಾತನಾಡಿ, ಅಲ್ಲದೇ, ಭಾರತೀಯ ಚರಿತ್ರೆಯಲ್ಲಿ ೧೯ನೇ ಶತಮಾನದ ಪೂರ್ವಭಾಗದ ಚಾರಿತ್ರಿಕ ಮಹತ್ವದ ಘಟನಾವಳಿಗಳಲ್ಲಿ ಆಂಗ್ಲೋ-ಕಿತ್ತೂರಿನ ಮೂರು ಯುದ್ಧಗಳು ಚರಿತ್ರೆಕಾರರ ಗಮನಸೆಳೆದಿವೆ. ಆಂಗ್ಲೋ-ಮರಾಠಾ, ಆಂಗ್ಲೋ-ಮೈಸೂರು ಕದನಗಳ ತರುವಾಯದಲ್ಲಿ ಆಂಗ್ಲೋ-ಕಿತ್ತೂರು ಕದನವು ಚರಿತ್ರೆಯಲ್ಲಿ ಹೆಚ್ಚು ಮಹತ್ವವನ್ನು ಪಡೆದಿದೆ. ಕ್ರಿ.ಶ. ೧೮೧೬ ರಿಂದ ೧೮೩೨ರ ವರೆಗಿನ ಚಾರಿತ್ರಿಕ ಘಟನೆಗಳ ಕೇಂದ್ರಬಿಂದು ಕಿತ್ತೂರು ಸಂಸ್ಥಾನವಾಗಿತ್ತು. ಅಂದಿನ ಬ್ರಿಟೀಷರ ಸಂಸತ್ತಿನ ನಡಾವಳಿಗಳನ್ನು ಅಧ್ಯಯಿಸುವ ಮೂಲಕ ಕಿತ್ತೂರು ಸಂಸ್ಥಾನದ ಚರಿತ್ರೆಗೆ ಹೊಸ ಆಯಾವನ್ನು ತಂದುಕೊಡಬಹುದು ಎಂದರು.
ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕರಾದ ಡಾ. ಶೋಭಾ ನಾಯಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠದ ಸಂಯೋಜಕರಾದ ಡಾ. ಎಂ. ಎನ್. ರಮೇಶ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಗಜಾನನ ನಾಯ್ಕ, ಡಾ. ಮಹೇಶ ಗಾಜಪ್ಪನವರ, ಡಾ. ಮೈತ್ರೆಯೀಣಿ ಗದಿಗೆಪ್ಪಗೌಡರ, ಡಾ. ಪಿ. ನಾಗರಾಜ, ಡಾ. ಅಶೋಕ ಮುಧೋಳ ಹಾಗೂ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಹಾಜರಿದ್ದರು, ರವಿ ಬಾಳಿಕಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ