
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಂಡಿಸಿದ ದಾಖಲೆಯ ೧೬ನೇ ಬಜೆಟ್ ಸಮತೋಲನದಿಂದ ಕೂಡಿದ್ದು, ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ.
ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಎಲ್ಲ ಕ್ಷೇತ್ರಗಳನ್ನೂ ಸಮನಾಗಿ ನೋಡಲಾಗಿದೆ. ಇದೊಂದು ಅಪರೂಪದ ಬಜೆಟ್ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಜೆಟ್ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಬೆಳಗಾವಿಯ ಅಥಣಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ ಘೋಷಿಸಿರುವುದು ಜಿಲ್ಲೆಯ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು 5 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ ಎಂದರು.
ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ, ಶಿಕ್ಷಣ ಕ್ಷೇತ್ರಗಳಿಗೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದ್ದು, ಸುಮಾರು 4.09 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ವಿರೋಧ ಪಕ್ಷಗಳು ಅನಾವಶ್ಯಕವಾಗಿ ಸರ್ಕಾರವನ್ನು ಟೀಕೆ ಮಾಡುವ ಬದಲಿಗೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೈಜೋಡಿಸಲಿ ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ