Kannada NewsKarnataka NewsLatest

ಕಾಂಗ್ರೆಸ್ ನಿಂದ ಚನ್ನರಾಜ ಹಟ್ಟಿಹೊಳಿ ಫೈನಲ್: ಸಿಂಗಲ್ ಟಿಕೆಟ್ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಡಿಸೆಂಬರ್ 10ರಂದು ನಡೆಯಲಿರುವ ವಿಧಾಪರಿಷತ್ ಚುನಾವಣೆಗೆ ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನರಾಜ ಹಟ್ಟಿಹೊಳಿ ಹೆಸರು ಅಂತಿಮವಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಈಗ ಸ್ವಲ್ಪಹೊತ್ತಿನ ಮೊದಲು ಬೆಂಗಳೂರಿನಲ್ಲಿ ನಡೆದ ಜಿಲ್ಲಾ ಮುಖಂಡರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬೆಳಗಾವಿಯ ಎರಡು ಸ್ಥಾನಗಳ ಪೈಕಿ ಸಿಂಗಲ್ ಟಿಕೆಟ್ ಘೋಷಿಸಲು ನಿರ್ಧರಿಸಲಾಗಿದೆ.

ಈ ಕುರಿತು ಅಧಿಕೃತ ಘೋಷಣೆ ಬಾಕಿ ಇದ್ದರೂ, ಕೆಲಸ ಆರಂಭಿಸುವಂತೆ ಚನ್ನರಾಜ ಹಟ್ಟಿಹೊಳಿ ಅವರಿಗೆ ಸೂಚನೆ ನೀಡಲಾಗಿದೆ.

ವಿಧಾನಪರಿಷತ್ತಿನ 2 ಸ್ಥಾನಗಳಿಗೆ ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಗೆ ಡಿ.10ರಂದು ಮತದಾನ ನಡೆಯಲಿದೆ. ಇದೇ 16ರಿಂದ 23ರ ವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಕಳೆದ 4 -5 ತಿಂಗಳಿನಿಂದಲೂ ಚುನಾವಣೆ ಸಿದ್ದತೆ ಮಾಡಿಕೊಂಡು, ತಾವು ಆಕಾಂಕ್ಷಿ ಎನ್ನುವುದನ್ನು ಪಕ್ಷದ ಹೈಕಮಾಂಡ್ ಗೆ ತಿಳಿಸಿ, ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಕಳೆದ 2 -3 ದಿನಗಳಿಂದ ಬೆಂಗಳೂರಿನಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಲ್ಲ ಮುಖಂಡರ ನೇತೃತ್ವದಲ್ಲಿ ಚರ್ಚೆ ನಡೆದಿತ್ತು.

ಸೋಮವಾರ ಸಂಜೆ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲೆಯ ಮುಖಂಡರು ಸಭೆ ನಡೆಸಿ ಚರ್ಚಿಸಿ, ಅಂತಿಮವಾಗಿ ಚನ್ನರಾಜ ಹೆಸರನ್ನು ಘೋಷಿಸಲು ನಿರ್ಧರಿಸಿದರು. ಸತೀಶ್ ಜಾರಕಿಹೊಳಿ ಅವರು ಮುಂದಾಳತ್ವದಲ್ಲೇ ಈ ಚುನಾವಣೆ ಗೆಲ್ಲಬೇಕು, ಇದಕ್ಕೆ ಎಲ್ಲ ನಾಯಕರೂ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಾಜಿ ಸಚಿವರಾದ ಎ.ಬಿ.ಪಾಟೀಲ, ಪ್ರಕಾಶ ಹುಕ್ಕೇರಿ, ಡಿ.ಬಿ.ಇನಾಮದಾರ, ಶಾಸಕರಾದ ಮಹಾಂತೇಶ ಕೌಜಲಗಿ, ಲಕ್ಷ್ಮಿ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್, ಮುಖಂಡರಾದ ಅಶೋಕ ಪಟ್ಟಣ, ರಾಜು ಕಾಗೆ, ಮಹಾವೀರ ಮೋಹಿತೆ, ಎ.ಬಿ.ಘಾಟಗೆ, ವಿಶ್ವಾಸ ವೈದ್ಯ, ಕಾಕಾಸಾಹೇಬ ಪಾಟೀಲ, ಲಕ್ಷ್ಮಣರಾವ ಚಿಂಗಳೆ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಚಿನ್ನ-ಬೆಳ್ಳಿ ದರ ಇಂದು ಎಷ್ಟಿದೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button