Belagavi NewsBelgaum NewsKannada NewsKarnataka News

*ಬೆಳಗಾವಿ ಎಪಿಎಂಸಿಯಲ್ಲಿ ಅವ್ಯವಸ್ಥೆ: ಅಧಿಕಾರಿಗಳಿಗೆ ಉಪ ಲೋಕಾಯುಕ್ತರ ತರಾಟೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆದ ತರಕಾರಿಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ರಸೀದಿ ಹಾಗೂ ತೂಕದ ದಾಖಲೆಗಳಿಲ್ಲದೆ ವಹಿವಾಟು ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಎಪಿಎಂಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಗುರುವಾರ ಮುಂಜಾನೆ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತರ ತಂಡ, ತರಕಾರಿ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಗಳನ್ನು ಪರಿಶೀಲಿಸಿತು. ಈ ವೇಳೆ ರೈತರಿಂದ ತರಕಾರಿ ಖರೀದಿಸುತ್ತಿದ್ದ ವ್ಯಾಪಾರಸ್ಥರ ಬಳಿ ಖರೀದಿ ರಸೀದಿಗಳಿಲ್ಲದಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳು, ತರಕಾರಿಯನ್ನು ಯಾರಿಂದ ಖರೀದಿಸಲಾಗುತ್ತಿದೆ, ರೈತರಿಗೆ ಯಾವ ದರ ನೀಡಲಾಗುತ್ತಿದೆ ಹಾಗೂ ವಹಿವಾಟಿನ ರಸೀದಿ ಮತ್ತು ತೂಕದ ದಾಖಲೆಗಳು ಎಲ್ಲಿವೆ ಎಂದು ಪ್ರಶ್ನಿಸಿದರು.

ಎಪಿಎಂಸಿಗೆ ಸಂಬಂಧವಿಲ್ಲದ ವ್ಯಕ್ತಿಗಳೂ ರೈತರಿಂದ ತರಕಾರಿ ಖರೀದಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ವಹಿವಾಟಿನ ಪಾರದರ್ಶಕತೆಯ ಬಗ್ಗೆ ಅಸಮಾಧಾನ ಹೊರಹಾಕಿದರು.

ರೈತರಿಗೆ ರಸೀದಿಯೂ ಇಲ್ಲ, ಸಮರ್ಪಕ ಬೆಲೆಯೂ ಇಲ್ಲ

ತರಕಾರಿ ಮಾರಾಟಕ್ಕೆ ಬಂದಿದ್ದ ರೈತ ನಾಗಪ್ಪ ತನಶಿ ಅವರನ್ನು ಸ್ಥಳದಲ್ಲೇ ವಿಚಾರಿಸಿದಾಗ, ತಾವು ತಂದಿದ್ದ ಕೊತ್ತಂಬರಿಗೆ 2,000 ರೂಪಾಯಿ ನೀಡಲಾಗಿದೆ. ಇದರಲ್ಲಿ ಶೇ.10ರಷ್ಟು ಕಮಿಷನ್ ನೀಡಬೇಕಿದ್ದು, ಆದರೆ ವಹಿವಾಟಿಗೆ ಸಂಬಂಧಿಸಿದಂತೆ ಯಾವುದೇ ರಸೀದಿ ನೀಡಿಲ್ಲ ಎಂದು ತಿಳಿಸಿದರು.

ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿ ಬಿ. ವೀರಪ್ಪ ಅವರು, ತಕ್ಷಣ ಸ್ಥಳಕ್ಕೆ ಆಗಮಿಸುವಂತೆ ಎಪಿಎಂಸಿ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ ಅವರಿಗೆ ಸೂಚಿಸಿದರು. ಮಾರುಕಟ್ಟೆಯಲ್ಲಿ ರಸೀದಿ ಇಲ್ಲದೆ ವಹಿವಾಟು ನಡೆಯುತ್ತಿರುವುದು ಹಾಗೂ ರೈತರಿಗೆ ಸೂಕ್ತ ಬೆಲೆ ದೊರೆಯದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸೀದಿ ಪುಸ್ತಕ ಎಲ್ಲಿದೆ ಎಂದು ಪ್ರಶ್ನಿಸಿ, ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.

ಕುಡಿಯುವ ನೀರಿನ ಘಟಕದಲ್ಲೂ ತರಕಾರಿ ಸಂಗ್ರಹ

ತರಕಾರಿ ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಮಾತ್ರವಲ್ಲದೆ, ಮೂಲಸೌಕರ್ಯಗಳ ನಿರ್ವಹಣೆಯಲ್ಲಿನ ಲೋಪಗಳನ್ನೂ ಉಪ ಲೋಕಾಯುಕ್ತರು ಗಮನಿಸಿದರು. ಕುಡಿಯುವ ನೀರಿನ ಘಟಕದಲ್ಲಿ ತರಕಾರಿಗಳನ್ನು ಇಟ್ಟಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮಾರುಕಟ್ಟೆಯಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದನ್ನೂ ಆಕ್ಷೇಪಿಸಿದರು.

ಎಪಿಎಂಸಿ ಕಾರ್ಯದರ್ಶಿಗಳು ತಮ್ಮ ಇಷ್ಟದಂತೆ ಮಾರುಕಟ್ಟೆಯನ್ನು ನಡೆಸುತ್ತಿರುವಂತಿದೆ ಎಂದು ಕಿಡಿಕಾರಿದ ನ್ಯಾಯಮೂರ್ತಿಗಳು, ಮಾರುಕಟ್ಟೆಯ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವುದರ ಜೊತೆಗೆ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಅಧಿಕಾರಿಗಳಿಗೆ ಬೇಕಾದ ರೀತಿಯಲ್ಲಿ ಮಾರುಕಟ್ಟೆ ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಉಪ ಲೋಕಾಯುಕ್ತರ ದಿಢೀರ್ ಭೇಟಿಯಿಂದ ಬೆಳಗಾವಿ ಎಪಿಎಂಸಿಯಲ್ಲಿನ ವಹಿವಾಟು ಹಾಗೂ ಆಡಳಿತಾತ್ಮಕ ವ್ಯವಸ್ಥೆಯಲ್ಲಿನ ಲೋಪಗಳು ಮುನ್ನೆಲೆಗೆ ಬಂದಿದ್ದು, ರೈತರಿಗೆ ನ್ಯಾಯಯುತ ಬೆಲೆ ಮತ್ತು ಪಾರದರ್ಶಕ ವಹಿವಾಟು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button