Kannada NewsKarnataka NewsPolitics

*ಹನಿಟ್ರ್ಯಾಪ್ ಭೀತಿ*: *ಹೈಕೋರ್ಟ್ ಮೊರೆ ಹೋದ ಮಾಜಿ ಶಾಸಕ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕಾರಣದಲ್ಲಿ ಸದ್ಯ ಸ್ಟಿಂಗ್ ಆಪರೇಷನ್ ಹಾಗೂ ಹನಿಟ್ರ್ಯಾಪ್ ಆರೋಪಗಳ ಕುರಿತು ಭಾರಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಜೆಡಿಎಸ್‌ನ ಮಾಜಿ ಶಾಸಕರೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ತಮ್ಮ ಖಾಸಗಿ ವಿಡಿಯೋ ಪ್ರಸಾರವಾಗುವ ಆತಂಕ ವ್ಯಕ್ತಪಡಿಸಿ ಮಾಜಿ ಶಾಸಕರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದು ರಹಸ್ಯವಾಗಿ ಚಿತ್ರೀಕರಿಸಲಾಗಿದೆ ಎನ್ನಲಾದ ವಿಡಿಯೋವನ್ನು ಪ್ರಸಾರ ಮಾಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ, ಅದರ ಪ್ರಸಾರ ಹಾಗೂ ಹಂಚಿಕೆಗೆ ನಿರ್ಬಂಧ ವಿಧಿಸುವಂತೆ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಜೆಡಿಎಸ್ ಮಾಜಿ ಶಾಸಕ ಎ.ಮಂಜುನಾಥ್ ಅವರಿಗೆ ಇದೀಗ ಹನಿಟ್ರಾಪ್ ಭೀತಿ ಎದುರಾಗಿದೆ. ತಮ್ಮ ಖಾಸಗಿ ವಿಡಿಯೋವನ್ನು ಸುದ್ದುವಾಹಿನಿಯೊಂದು ಪ್ರಸಾರ ಮಾಡುವ ಆತಂಕದಲ್ಲಿ ಅವರಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಮಹಿಳೆಯ ಮೂಲಕ ತಮ್ಮನ್ನು ಕರೆಸಿಕೊಂಡು, ಅರಿವಿಗೆ ಬಾರದಂತೆ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಚಿತ್ರೀಕರಿಸಲಾಗಿದೆ ಎಂದು ಮಂಜುನಾಥ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, ರಹಸ್ಯವಾಗಿ ಚಿತ್ರೀಕರಿಸಲಾದ ‘ಸ್ಟಿಂಗ್ ವಿಡಿಯೋ’ ತಮ್ಮ ಬಳಿ ಇರುವುದಾಗಿ ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹೇಳಲಾಗಿದೆ. ವಿಜಯದಶಮಿ ಹಬ್ಬ ಮುಗಿದ ಬಳಿಕ ವಿಡಿಯೋವನ್ನು ಪ್ರಸಾರ ಮಾಡುವುದಾಗಿಯೂ ತಿಳಿಸಲಾಗಿದೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಈ ವಿಡಿಯೋ ನಿಜವಾಗಿಯೂ ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಸಂಬಂಧಿಸಿದ ಘಟನೆ 2023ರ ಮಾರ್ಚ್‌ನಲ್ಲಿ ನಡೆದಿದೆ ಎನ್ನುವುದು ಅರ್ಜಿಯಲ್ಲಿನ ವಾದವಾಗಿದೆ. ಒಂದು ನೆಪವೊಡ್ಡಿ ತಮ್ಮನ್ನು ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಂಡು, ತಮ್ಮ ಗಮನಕ್ಕೆ ಬಾರದಂತೆ ರಹಸ್ಯವಾಗಿ ಚಿತ್ರೀಕರಣ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಡಿಯೋವನ್ನು ತಾವು ಈವರೆಗೆ ನೋಡಿಲ್ಲ. ಆದರೂ ಅದನ್ನು ಪ್ರಸಾರ ಮಾಡುವುದಾಗಿ ಹೇಳಿರುವುದರಿಂದ ತಮ್ಮ ಖಾಸಗಿತನಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ ಎಂಬುದು ಅವರ ಅರ್ಜಿಯ ಪ್ರಮುಖ ಅಂಶವಾಗಿದೆ.

ಈ ಹಿನ್ನೆಲೆಯಲ್ಲಿ ವಿಡಿಯೋ ಪ್ರಸಾರವಾಗದಂತೆ ತಡೆಯಲು ನ್ಯಾಯಾಲಯದ ಮಧ್ಯಪ್ರವೇಶ ಕೋರಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button