ಧರ್ಮದತ್ತಿ ಇಲಾಖೆ ಅಧಿಕಾರ ರವಿ ಕೊಟಾರಗಸ್ತಿ ಸೇವಾ ನಿವೃತ್ತಿ
ಪ್ರಗತಿವಾಹಿನಿ ಸುದ್ದಿ, ಕೊಲ್ಲೂರು: ಧರ್ಮದತ್ತಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಉಡುಪಿಯ ಮಂದಾರ್ತಿ ದೇವಾಲಯ ಹಾಗೂ ಹೆಚ್ಚುವರಿಯಾಗಿ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತಿ ಹೊಂದಿರ ಎಸ್.ಸಿ.ಕೊಟಾರಗಸ್ತಿ (ರವಿ ಕೊಟಾರಗಸ್ತಿ) ಅವರನ್ನು ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ಮೂಲತಃ ವಿಜಯಪುರದವರಾದ ಕೊಟಾರಗಸ್ತಿ, ಸವದತ್ತಿ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸೇವೆ ಸಲ್ಲಿಸಿ ಬೆಳಗಾವಿಯ ನಿವಾಸಿಯೆನಿಸಿದ್ದಾರೆ. ಬೆಳಗಾವಿಯ ಸಾಮಾಜಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸೇವಾವಧಿಯಲ್ಲಿ ಎಲ್ಲ ಕಡೆಯೂ ಅತ್ಯಂತ ಜನಾನುರಾಗಿ ಅಧಿಕಾರಿ ಎನಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
“ಕೊಟಾರಗಸ್ತಿ ಅವರ ಆಡಳಿತಾವಧಿಯಲ್ಲಿ ಕೊಲ್ಲೂರಿನಲ್ಲಿ ನಡೆದ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ನಮ್ಮ ಅನುಭವದಲ್ಲೇ ಇಷ್ಟೊಂದು ವ್ಯವಸ್ಥಿತವಾಗಿ ನಡೆದಿದ್ದಿಲ್ಲ” ಎಂದು ಅರ್ಚಕ ವೃಂದದವರು ಕೊಂಡಾಡಿ, ನಮ್ಮ ದೇವಸ್ಥಾನಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದೀರಿ ಎಂದು ಬೀಳ್ಕೊಡುಗೆ ವೇಳೆ ಪ್ರಶಂಸಿಸಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಾಲಯದ ಅರ್ಚಕರೂ, ತಂತ್ರಿಗಳೂ ಆದ ನರಸಿಂಹ ಅಡಿಗ, ಶ್ರೀಧರ ಅಡಿಗ, ಗೋವಿಂದ ಅಡಿಗ, ಮಂಜುನಾಥ ಅಡಿಗ ಸೇರಿದಂತೆ ಎಲ್ಲ ಅರ್ಚಕರು, ಸಿಬ್ಬಂದಿ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ