Belagavi NewsBelgaum NewsKannada NewsLatestPragativahini Special

ಅಗಣಿತ ಗುಣಗಳ ರಾಣಿ ಚೆನ್ನಮ್ಮ

ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಸಬಲೀಕರಣ ಸಚಿವರು

ಕಿತ್ತೂರು ರಾಣಿ ಚೆನ್ನಮ್ಮ – ಸುಮಾರು 200 ವರ್ಷಗಳ ಹಿಂದೆ ನಮ್ಮ ಈ ನೆಲದಲ್ಲಿ ಹುಟ್ಟಿ, ಬೆಳೆದು, ಈ ನೆಲಕ್ಕೊಂದು ಹೊಸ ಇತಿಹಾಸವನ್ನೇ ನಿರ್ಮಿಸಿ ಮರೆಯಾದ ಈ ಹೆಸರು ಕೇಳಿದರೆ ಇಂದಿಗೂ ಒಂದು ಕ್ಷಣ ಮೈಯಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಆದರ್ಶ ಎನ್ನಬಹುದಾದ ಎಲ್ಲ ಗುಣಗಳನ್ನೂ ಒಳಗೊಂಡು, ಬದುಕಿದರೆ ಹೀಗೆ ಬದುಕಬೇಕು ಎಂದು ತೋರಿಸಿಕೊಟ್ಟ, ಅಗಣಿತ ಗುಣಗಳ ಸಾರವೇ ಆಗಿದ್ದ ಚೆನ್ನಮ್ಮ ನಮಗೆ ಬಿಟ್ಟು ಹೋದ ಆದರ್ಶಗಳಿಗೆ ಲೆಕ್ಕವೇ ಇಲ್ಲ.

ತಾನು ಹೆಸರು ಮಾಡಬೇಕು, ಅಧಿಕಾರ ಅನುಭವಿಸಬೇಕು ಎನ್ನುವ ಲವಲೇಶವೂ ಇಲ್ಲದೆ ತನ್ನ ಪ್ರಜೆಗಳಿಗೋಸ್ಕರ, ನಮ್ಮ ನೆಲದ ಸ್ವಾಭಿಮಾನಕ್ಕೆ ಕೂದಲೆಳೆಯಷ್ಟೂ ಧಕ್ಕೆ ಬರದಂತೆ ಆಳುವುದೇ ಆಡಳಿತ ಎನ್ನುವ ಸಂದೇಶವನ್ನು ಸಾರಿಹೋದ ರಾಣಿ ಚೆನ್ನಮ್ಮ ಇಡೀ ಮನುಕುಲಕ್ಕೊಂದು ಆದರ್ಶ.

ಬೆಳಗಾವಿ ನಗರದಿಂದ 6 ಕಿಮೀ ಉತ್ತರದಲ್ಲಿರುವ ಕಾಕತಿ ಎನ್ನುವ ಸಣ್ಣ ಗ್ರಾಮದಲ್ಲಿ ದೇಸಾಯಿ ಧೂಳಪ್ಪಗೌಡ ಹಾಗೂ ಪದ್ಮಾವತಿಯ ಮಗಳಾಗಿ ಚೆನ್ನಮ್ಮ 1978ರಲ್ಲಿ ಹುಟ್ಟಿದಳು. (ಚೆನ್ನಮ್ಮನ ಜನ್ಮ ದಿನ ಅಕ್ಟೋಬರ್ 23 ಎಂದು ಹಲವೆಡೆ ಉಲ್ಲೇಖವಾಗಿದ್ದರೂ ನಿಜವಾದ ಜನ್ಮ ದಿನ ಅದಲ್ಲ. ಅಕ್ಟೋಬರ್ 23 ಚೆನ್ನಮ್ಮ ಬ್ರಿಟೀಶರ ವಿರುದ್ಧ ಮೊದಲ ಗೆಲುವು ಸಾಧಿಸಿದ ದಿನ. ಹಾಗಾಗಿ ಇಂದು ನಾವು ಅಕ್ಟೋಬರ್ 23ರಂದು ಕಿತ್ತೂರು ಚೆನ್ನಮ್ಮನ ವಿಜಯೋತ್ಸವವನ್ನು ಕಿತ್ತೂರು ಉತ್ಸವವಾಗಿ ಆಚರಿಸುತ್ತೇವೆ.) ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಆಕೆ ಚಿಕ್ಕಂದಿನಲ್ಲೇ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆ ತರಬೇತಿ ಪಡೆದಿದ್ದಳು.

1793ರಲ್ಲಿ ಅವಳ 15ನೇ ವಯಸ್ಸಿನಲ್ಲೇ ಕಿತ್ತೂರು ಸಂಸ್ಥಾನದ ದೇಸಾಯಿ ಮನೆತನದ ರಾಜಾ ಮಲ್ಲಸರ್ಜನಿಗೆ ವಿವಾಹ ಮಾಡಿಕೊಡಲಾಯಿತು. ರಾಜ ಮಲ್ಲಸರ್ಜ ದೇಸಾಯಿ ವಂಶದ ರಾಜ. ಮಲ್ಲಸರ್ಜ ರಾಜನು ಪ್ರಯಾಣದ ಸಮಯದಲ್ಲಿ ಕಾಕತಿ ಗ್ರಾಮದ ಬಳಿ ನಿಲ್ಲಿಸಿದನೆಂದು ಜಾನಪದ ಹೇಳುತ್ತದೆ. ನರಭಕ್ಷಕ ಹುಲಿಯಿಂದ ಗ್ರಾಮದ ಜನರು ಕಂಗಾಲಾಗಿದ್ದರು. ಗ್ರಾಮಸ್ಥರು ತಮ್ಮ ಪ್ರದೇಶದಲ್ಲಿ ರಾಜ ಮಲ್ಲಸರ್ಜನ ಶಿಬಿರವನ್ನು ನೋಡಿ ಸಹಾಯಕ್ಕಾಗಿ ವಿನಂತಿಸಿದರು. ರಾಜ ಮಲ್ಲಸರ್ಜ ತಕ್ಷಣವೇ ಹುಲಿಯನ್ನು ಬೇಟೆಯಾಡಲು ಹೊರಟನು. ಕಾಡಿನಲ್ಲಿ ಹುಲಿ ಕಂಡ ತಕ್ಷಣ ಬಾಣ ಬಿಟ್ಟನು. ಆದರೆ ರಾಜ ಹತ್ತಿರ ಹೋಗಿ ನೋಡಿದಾಗ ಹುಲಿಗೆ ಒಂದಲ್ಲ ಎರಡು ಬಾಣಗಳು ತಗುಲಿದ್ದವು. ಸ್ವಲ್ಪ ದೂರದಲ್ಲಿ ಚಿಕ್ಕ ಹುಡುಗಿಯೊಬ್ಬಳು ಬಿಲ್ಲು ಹಿಡಿದು ನಿಂತಿರುವುದನ್ನು ಮಲ್ಲಸರ್ಜನು ನೋಡಿದನು. ಆ ಹುಡುಗಿ ಚೆನ್ನಮ್ಮ. ಚೆನ್ನಮ್ಮನೂ ಆ ಹುಲಿಯನ್ನು ಹುಡುಕಿಕೊಂಡು ಹೊರಟಿದ್ದಳು. ಮಲ್ಲಸರ್ಜ ರಾಜನು ಚೆನ್ನಮ್ಮನ ಧೈರ್ಯ ಮತ್ತು ಸೌಂದರ್ಯದಿಂದ ಆಕರ್ಷಿತನಾದನು. ಇಬ್ಬರು ಮದುವೆಯಾದರು. ಚೆನ್ನಮ್ಮ ರಾಜ ಮಲ್ಲಸರ್ಜನ ಕಿರಿಯ ರಾಣಿಯಾದಳು.

ರಾಜ ಮಲ್ಲ ಸರ್ಜರ ಮೊದಲ ಪತ್ನಿ ರಾಣಿ ರುದ್ರಮ್ಮ ಕೂಡ ದೇಸಾಯಿ ವಂಶಕ್ಕೆ ಸೇರಿದವರು. ಕಿತ್ತೂರಿಗೆ ಬಂದ ರಾಣಿ ಚೆನ್ನಮ್ಮ ರಾಣಿ ರುದ್ರಮ್ಮನ ಜೊತೆ ತುಂಬಾ ಸೌಹಾರ್ದ ಸಂಬಂಧ ಬೆಳೆಸಿದಳು. ರಾಣಿ ರುದ್ರಮ್ಮನ ಮಕ್ಕಳಿಬ್ಬರಿಗೂ ಅದೇ ಪ್ರೀತಿಯನ್ನು ತೋರಿಸತೊಡಗಿದಳು. ಮೇಧಾವಿ ಚೆನ್ನಮ್ಮ ಶೀಘ್ರದಲ್ಲೇ ರಾಜ್ಯಕ್ಕೆ ಮಾರ್ಗದರ್ಶಿ ಪಾತ್ರವನ್ನು ವಹಿಸಿಕೊಂಡಳು. ಕಿತ್ತೂರಿನ ಜನರು ರಾಣಿ ಚೆನ್ನಮ್ಮನನ್ನು ತುಂಬಾ ಗೌರವಿಸಲು ಪ್ರಾರಂಭಿಸಿದರು. ರಾಜನ ಕೆಲವು ನಿರ್ಧಾರಗಳನ್ನು  ಮರುಪರಿಶೀಲಿಸಲು ಜನರು ರಾಣಿ ಚೆನ್ನಮ್ಮನ ಬಳಿಗೆ ಹೋಗುತ್ತಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ. 

ಮಲ್ಲ ಸರ್ಜನ ಎರಡನೇ ಪತ್ನಿಯಾಗಿ ಹೋದ ಚೆನ್ನಮ್ಮ ಮೊದಲು ಅರಮನೆಯೊಳಗಿನ ಎಲ್ಲ ಸಂಬಂಧಗಳನ್ನು ಗೌರವಿಸುತ್ತ ಎಲ್ಲರ ಮನ ಗೆದ್ದಳು. ಮನೆ ಗೆದ್ದು ಮಾರು ಗೆದೆ ಎನ್ನುವ ಗಾದೆ ಮಾತಿಗೆ ಅನುಗುಣವಾಗಿ ಮಲ್ಲ ಸರ್ಜನ ಮೊದಲ ಪತ್ನಿ ಸೇರಿದಂತೆ ಎಲ್ಲರ ಮನಸ್ಸನ್ನು ಗೆದ್ದ ಚೆನ್ನಮ್ಮ, ತನ್ನ ಎಲ್ಲ ಪ್ರಜೆಗಳನ್ನೂ, ಯಾವ ಭೇದ ಭಾವವಿಲ್ಲದೆ ಒಂದೇ ರೀತಿ ಪ್ರೀತಿಯಿಂದ ಕಾಣುವ ಮೂಲಕ ಅವರ ಮನಸ್ಸನ್ನೂ ಗೆದ್ದಳು. ನೈಸರ್ಗಿಕ ವಿಕೋಪಗಳು ಬಂದಾಗ ಎಲ್ಲ ಪ್ರಜೆಗಳ ನೆರವಿಗೆ ಗಟ್ಟಿಯಾಗಿ ನಿಂತು ಗಟ್ಟಿ ಗಿತ್ತಿ ಎನಿಸಿದಳು.

ಈಸ್ಟ್ ಇಂಡಿಯಾ ಕಂಪನಿ

ಅದು ಬ್ರಿಟಿಷರು ಭಾರತದಲ್ಲಿ ಕಾಲೂರುತ್ತಿದ್ದ ಸಮಯ. ಆಗ ಇಲ್ಲಿಯ ರಾಜಕೀಯ ಪರಿಸ್ಥಿತಿ ಬಹಳ ವಿಚಿತ್ರವಾಗಿತ್ತು. ದುರ್ಬಲವಾಗಿದ್ದ ಆಡಳಿತ ಪರಿಸ್ಥಿತಿಯ ದುರ್ಲಾಭ ಪಡೆದ ಧೂರ್ತ, ಕ್ರೂರ ಧೋರಣೆಯ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಇದೇ ಸುವರ್ಣಾವಕಾಶ ಎಂದು ಗಟ್ಟಿಯಾಗಿ ನೆಲೆಯೂರಿತು. ಇಂತಹ ಸಮಯದಲ್ಲಿ ಮಲ್ಲಸರ್ಜ ದೊರೆಯನ್ನು ಟಿಪ್ಪು ಸುಲ್ತಾನನು ಸೆರೆ ಹಿಡಿದು ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ ಕಿತ್ತೂರ ಸಂಸ್ಥಾನವನ್ನು ಭದ್ರ ಗೊಳಿಸಿದ್ದನು.

1809ರಲ್ಲಿ ಪೇಶ್ವೆಯವರಿಗೆ ಅವರ ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು ನೀಡಿ ಅವರಿಂದ ಸನದು ಪಡೆದಿದ್ದನು. ಆದರೆ ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ ಹಿಡಿದು 3 ವರ್ಷ ಕಾಲ ಪುಣೆಯಲ್ಲಿಟ್ಟರು. 1816ರಲ್ಲಿ ಬಿಡುಗಡೆ ಹೊಂದಿ ಮರಳುವಾಗ ದಾರಿಯಲ್ಲಿಯೆ ಮಲ್ಲಸರ್ಜನು ಕೊನೆಯುಸಿರೆಳೆದ. ಅವನ ಮೊದಲ ಪತ್ನಿಯ ಮಗ ಶಿವಲಿಂಗ ರುದ್ರಸರ್ಜನಿಗೆ ಪಟ್ಟಕಟ್ಟಿದರು. ಆದರೆ ಆತನು ಸಹ ಬಹುಕಾಲ ಬದುಕುಳಿಯಲಿಲ್ಲ. 1824ರಲ್ಲಿ ಆತ ಕೊನೆಯುಸಿರೆಳೆದ. ಮರಣದ ಪೂರ್ವದಲ್ಲಿ ಶಿವಲಿಂಗ ರುದ್ರ ಸರ್ಜ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡಿದ್ದ.

ಸಂಪದ್ಭರಿತ ಕಿತ್ತೂರಿನ ಮೇಲೆ ಕಣ್ಣು

ಅದಾಗಲೇ ಅತ್ಯಂತ ಸಂಪದ್ಭರಿತವಾಗಿದ್ದ ಕಿತ್ತೂರು ಸಂಸ್ಥಾನದ ಮೇಲೆ ಬ್ರಿಟೀಶರ ಕಣ್ಣಿತ್ತು. ಕಿತ್ತೂರು ಮೈಸೂರು  ರಾಜ್ಯದ ಒಂದು ಸಣ್ಣ ಸ್ವತಂತ್ರ ಸಂಸ್ಥಾನವಾಗಿತ್ತು. ಜೊತೆಗೆ ಅದು ಅತ್ಯಂತ ಸಮೃದ್ಧ ರಾಜ್ಯವೂ ಆಗಿತ್ತು. ಕಿತ್ತೂರಿನಲ್ಲಿ ಒಂದು ವ್ಯಾಪಾರ ಕೇಂದ್ರವಿದ್ದು ಅಲ್ಲಿಂದ ಅನೇಕ ರೀತಿಯ ವ್ಯಾಪಾರ ನಡೆಯುತ್ತಿತ್ತು. ಚಿಕ್ಕ ಸಾಮ್ರಾಜ್ಯವಾದ ಕಿತ್ತೂರು ತನ್ನ ಸಂಪತ್ತಿಗೆ ಹೆಸರುವಾಸಿಯಾಗಿತ್ತು. ಕಿತ್ತೂರಿನಲ್ಲಿ ಬತ್ತದ ಬೆಳೆ ಇಳುವರಿ ಅಧಿಕವಾಗಿತ್ತು. ಇದೇ ಕಾರಣಕ್ಕೆ ಕಿತ್ತೂರಿನ ಮೇಲೆ ಬ್ರಿಟಿಷರು ನೇರ ನಿಯಂತ್ರಣ ಬಯಸಿದ್ದರು. 

ಶಿವಲಿಂಗ ರುದ್ರ ಸರ್ಜನ ಸಾವು ಬ್ರಿಟೀಶರಿಗೆ ವರವಾಯಿತು. ಹಾಗಾಗಿ, ಶಿವಲಿಂಗ ಸರ್ಜನ ದತ್ತಕವನ್ನು ಧಾರವಾಡದ ಕಲೆಕ್ಟರ್ ಥ್ಯಾಕರೆ ತಿರಸ್ಕರಿಸುತ್ತಾನೆ. ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪ ಶೆಟ್ಟಿ ಹಾಗೂ ಹಾವೇರಿ ವೆಂಕಟರಾವ್ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ.

ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದವಳು ಮೃತ ಶಿವಲಿಂಗ ರುದ್ರ ಸರ್ಜನ ಮಲತಾಯಿ ಚೆನ್ನಮ್ಮ. ಕಿತ್ತೂರು ಸಂಸ್ಥಾನವನ್ನು ಸಂಪೂರ್ಣ ವಶಪಡಿಸಿಕೊಳ್ಳಬೇಕು ಎನ್ನುವ ಬ್ರಿಟೀಶರ ಹುನ್ನಾರದ ವಿರುದ್ಧ ಸಿಡಿದೆದ್ದ ಚೆನ್ನಮ್ಮ, ಯಾರನ್ನು ದತ್ತು ತೆಗೆದುಕೊಳ್ಳಬೇಕೆನ್ನುವುದನ್ನು ನಿರ್ಧರಿಸುವುದು ಬ್ರಿಟೀಶ್ ಸರಕಾರವಲ್ಲ ಎಂದು ಸಾರಿದಳು. ಯಾರಿಗೆ ಪಟ್ಟಕಟ್ಟಬೇಕು ಎನ್ನುವುದು ಜನರಿಗೆ ಸಂಬಂಧಿಸಿದ್ದು, ನಮ್ಮ ಸಂಸ್ಥಾನದ ವಿಷಯದಲ್ಲಿ ಬ್ರಿಟೀಶರು ತಲೆ ಹಾಕಬಾರದು ಎಂದು ಗಟ್ಟಿ ನಿರ್ಧಾರ ತಳೆದ ಚೆನ್ನಮ್ಮ ಚನ್ನ ಚಾಣಾಕ್ಷ ನಡೆಯಿಂದ ಮುಂದಡಿಯಿಟ್ಟಳು. ಹಾಗಾಗಿ ಮೊದಲ ಯುದ್ಧದಲ್ಲಿ ಚೆನ್ನಮ್ಮ ದಿಗ್ವಿಜಯ ಸಾಧಿಸುತ್ತಾಳೆ.

ರಾಜ್ಯದ ಅಧಿಕಾರವನ್ನು ಪುರುಷರೆ ಚಲಾಯಿಸುತ್ತಿದ್ದ ಕಾಲ ಅದಾಗಿತ್ತು. ತಂದೆಯ ನಂತರ ಮಗನಿಗೆ ಮಾತ್ರ ರಾಜ್ಯದ ಸಿಂಹಾಸನದ  ಹಕ್ಕಿರುತ್ತಿತ್ತು. ಯಾವುದೇ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಇರಲಿಲ್ಲ. ಆ ಅವಧಿಯಲ್ಲಿ ಆಸ್ಥಾನದಲ್ಲಿ ಕುಳಿತು ಬ್ರಿಟಿಷರ ವಿರುದ್ಧ ಹೋರಾಡಿ ರಾಜ್ಯಭಾರ ಮಾಡಿದವರು ರಾಣಿ ಚೆನ್ನಮ್ಮ. ಕಿತ್ತೂರು ಸಂಸ್ಥಾನದಲ್ಲಿ ಪುರುಷ ದೊರೆ ಇಲ್ಲದ ಕಾರಣ ಬ್ರಿಟಿಷ್ ಸರ್ಕಾರ, ರಾಜ್ಯದ ಮೇಲೆ ಹಿಡಿತ ಸಾಧಿಸಲು ಬಯಸಿದ ಸಮಯದಲ್ಲಿ, ಅವರು ಹೋರಾಟ ನಡೆಸಿದರು. ಕಿತ್ತೂರು ರಾಜ್ಯಕ್ಕೆ ಪುರುಷ ವಾರಸುದಾರರಿಲ್ಲದ ಕಾರಣ ಬ್ರಿಟಿಷ್ ಸರ್ಕಾರವು ದುರಾಡಳಿತದ ಆರೋಪ ಹೊರಿಸಿ ಅದನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿತು. 

ಕಿತ್ತೂರು ಸ್ವತಂತ್ರ ಸಂಸ್ಥಾನವಾಗುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಯುದ್ಧ ಸಿದ್ಧತೆಗಳನ್ನು ಪೂರೈಸಿಕೊಳ್ಳುವವರೆಗೆ ಸಂಧಾನದ ಮಾತು ಆಡುತ್ತಿದ್ದ ಬ್ರಿಟಿಷರು ತಮ್ಮ ಯುದ್ಧ ಖೈದಿಗಳು ಬಿಡುಗಡೆ ಆಗುತ್ತಲೇ ಆಧುನಿಕ ಯುದ್ಧ ಸಾಮಗ್ರಿಗಳೊಂದಿಗೆ ಯುದ್ಧ ಆರಂಭಿಸಿಯೇ ಬಿಟ್ಟರು. ಬ್ರಿಟಿಷರಿಗೆ ಕಿತ್ತೂರು ಕೋಟೆಯಲ್ಲಿದ್ದ ವಿದ್ರೋಹಿಗಳು ಕೈಜೋಡಿಸಿದರು. ಅದಾಗಲೇ ಸಂಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆಲವರು ಬ್ರಿಟೀಶರಿಗೆ ನೆರವಾಗುವಂತಹ ರೀತಿ ನಡೆದುಕೊಂಡರು. ಬ್ರಿಟೀಶರ ಆಮಿಷಗಳಿಗೆ ಬಲಿಯಾಗಿ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡರು.

ಬ್ರಿಟಿಷ್ ಸರ್ಕಾರದ ಈ ಸಾಮ್ರಾಜ್ಯಶಾಹಿ ನೀತಿಯ ವಿರುದ್ಧ ಚನ್ನಮ್ಮನ ಹೋರಾಟ ಆ ಕಾಲದ ಯಾವ ಪುರುಷ ದೊರೆಗೂ  ಕಡಿಮೆ ಇರಲಿಲ್ಲ. ಆದರೆ, ರಾಣಿ ಚೆನ್ನಮ್ಮನ ಹೋರಾಟದ ಬದುಕಿನ ಕಥೆ, ಭಾರತೀಯ ಇತಿಹಾಸದಲ್ಲಿ ಕೆಲವೇ ಪದಗಳಲ್ಲಿ ದಾಖಲಾಗಿದೆ. ಬ್ರಿಟೀಷರ ಆಡಳಿತದ ವಿರುದ್ಧ ಹೋರಾಡಿದ ಇತರ ಪುರುಷ ರಾಜರು ಅನುಭವಿಸಿದ ಸ್ಥಾನವನ್ನು ಅವರು ಇತಿಹಾಸದಲ್ಲಿ ಪಡೆಯಲಿಲ್ಲ. 

ಮೋಸದಿಂದ ಚೆನ್ನಮ್ಮನನ್ನು ಬಂಧಿಸಲಾಯಿತು. ಕುತಂತ್ರದಿಂದ ಪ್ರಜೆಗಳನ್ನು ಸಾಯಿಸಲಾಯಿತು. ತಾನೇ ನಂಬಿದವರ ಮೋಸದಿಂದ ಚೆನ್ನಮ್ಮ ಸೋಲೊಪ್ಪಬೇಕಾಯಿತು. 4 ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ ಸೆರೆಮನೆಯಲ್ಲೇ ನಿಧನಹೊಂದುತ್ತಾಳೆ.

ಚೆನ್ನಮ್ಮನ ಮೌಲ್ಯಾಧಾರಿತ ಗುಣಗಳು

ಕೌಟುಂಬಿಕ ಸಂಬಂಧಗಳಿಗೆ ಗೌರವ ನೀಡುವ ಅತ್ಯಮೂಲ್ಯವಾದ ಗುಣವನ್ನು ಹೊಂದಿದ್ದ ಚೆನ್ನಮ್ಮ, ಪ್ರಜೆಗಳಿಗೆ ಮೊದಲ ಆದ್ಯತೆ ನೀಡುವ ದೃಷ್ಟಿಕೋನದ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಳು. ದತ್ತು ಸ್ವೀಕರಿಸುವುದು ಸೇರಿದಂತೆ ಯಾವುದೇ ಪ್ರಮುಖ ನಿರ್ಣಯಗಳು ಸ್ಥಳೀಯ ಜನರಿಂದಲೇ ಆಗಬೇಕು ಎನ್ನುವ ಚೆನ್ನಮ್ಮನ ನಿಲುವು ಪ್ರಜೆಗಳ ಮನಸ್ಸನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿತು. ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯ ಸಿಲುಕಿದಾಗ ತನ್ನ ವಯಕ್ತಿಕ ಕಷ್ಟ ಕಾರ್ಪಣ್ಯಗಳನ್ನೂ ಲೆಕ್ಕಿಸದೆ ಪ್ರಜೆಗಳಿಗೋಸ್ಕರ ಖಡ್ಗ ಹಿಡಿದು ಹೋರಾಡಿದ ಧೀರತನ ಎಲ್ಲರ ಮೆಚ್ಚುಗೆ ಗಳಿಸಿತು.

ಜನರಿಗಾಗಿಯೇ ಆಡಳಿತವಿರಬೇಕೇ ವಿನಃ ಆಳುವವರಿಗಾಗಿ ಅಲ್ಲ ಎನ್ನುವ ದಿಟ್ಟ ನಿಲುವನ್ನು ತಳೆದಿದ್ದ ಚೆನ್ನಮ್ಮ, ತಾನು ವೀರರಾಣಿಯಾಗಿ ಮೆರೆಯಬೇಕೆಂದು ಕನಸಲ್ಲೂ ಕಂಡವಳಲ್ಲ. ಜನರಿಗಾಗಿಯೇ ಆಡಳಿತ ಇರಬೇಕು ಎಂದು ಗಟ್ಟಿಯಾಗಿ ಪ್ರತಿಪಾದಿಸಿದವಳು ಚೆನ್ನಮ್ಮ. ಜನರ ಯೋಗಕ್ಷೇಮವೇ ಸಂಸ್ಥಾನದ ಉದ್ದೇಶ ಎಂದು ಸಾರಿದಳು. ಹಲವು ಸೇನಾಪತಿಗಳು ಬ್ರಿಟೀಶರ ಜೊತೆ ಒಳ ಒಪ್ಪಂದ ಮಾಡಿಕೊಂಡಾಗಲೂ ತನ್ನ ಗಟ್ಟಿಯಾದ ನಿಲುವಿನಿಂದ ಹಿಂದಡಿಯಿಡಲಿಲ್ಲ.

ಸಂಗೊಳ್ಳಿ ರಾಯಣ್ಣನ ನಿಷ್ಠೆ

ರಾಣಿ ಚೆನ್ನಮ್ಮನ ಗುಣಗಳನ್ನು ನಾವು ಗೌರವಿಸುವುದರ ಜೊತೆ ಜೊತೆಗೇ ಚೆನ್ನಮ್ಮನ ಬಲಗೈ ಬಂಟ ಎಂದೇ ಗುರುತಿಸಲ್ಪಟ್ಟಿದ್ದ ಸಂಗೊಳ್ಳಿ ರಾಯಣ್ಣನ ನಿಷ್ಠೆ ಮತ್ತು ಹೋರಾಟದ ಛಲಗಳನ್ನೂ ಗೌರವಿಸುತ್ತೇವೆ. ಚೆನ್ನಮ್ಮನಿಗೆ ಹತ್ತಿರವಿದ್ದವರೇ ಮೋಸ ಮಾಡಿದಾಗ ಸಂಗೊಳ್ಳಿ ರಾಯಣ್ಣ ಗಟ್ಟಿಯಾಗಿ ನಿಂತುಕೊಳ್ಳುತ್ತಾನೆ. ಅನಿವಾರ್ಯವಾದಾಗ ಭೂಗತನಾಗಿದ್ದುಕೊಂಡು ಸೈನಿಕರ ಪಡೆ ಕಟ್ಟಿದ ಗುಡ್ಡಗಾಡು ಪ್ರದೇಶದಲ್ಲಿ ಇದ್ದುಕೊಂಡು ಸೈನಿಕರಿಗೆ ತರಬೇತಿ ನೀಡಿ ಗೇರಿಲ್ಲಾ ಮಾದರಿಯಲ್ಲಿ ಕಚೇರಿಗಳ ಮೇಲೆ ದಾಳಿ ಮಾಡುವುದನ್ನು ಆರಂಭಿಸಿದ. ಕಾಳಗದಲ್ಲಿ ಸೆರೆ ಸಿಕ್ಕು ಆ ಮೇಲೆ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ 1829ರಲ್ಲಿ ಹೋರಾಟ ಮುಂದುವರೆಸುತ್ತಾನೆ.

ಬ್ರಿಟಿಷರು ಕುಟಿಲ ತಂತ್ರಗಳಿಂದ ವಶಪಡಿಸಿಕೊಂಡ ಕಿತ್ತೂರು ಪ್ರಾಂತ್ಯವನ್ನು ಬಿಡುಗಡೆ ಮಾಡಲು ಸಂಗೊಳ್ಳಿ ರಾಯಣ್ಣ ಮಾಡಿದ ಕೊನೆ ಪ್ರಯತ್ನವೂ ವಿಫಲವಾಗಿದ್ದರಿಂದ ಕಿತ್ತೂರು ಚೆನ್ನಮ್ಮ ಸೆರೆಮನೆಯಲ್ಲಿಯೇ ಕೊರಗುತ್ತಾಳೆ. ಕಿತ್ತೂರು ಸಂಸ್ಥಾನದ ಅವಸಾನದ ನೋವಿನಲ್ಲೇ ಆರು ವರ್ಷ ಬೈಲಹೊಂಗಲ ಸೆರೆಮನೆಯಲ್ಲಿದ್ದ ಕಿತ್ತೂರು ರಾಣಿ ಚೆನ್ನಮ್ಮ ಮರಣಿಸಿದಳು.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕೆ ಬಹುಮುಂಚೆಯೇ (1852) ಕಿತ್ತೂರಿನ ವೀರರಾಣಿ ಚೆನ್ನಮ್ಮ ಬ್ರಿಟಿಷರಿಗೆ (1924) ಪ್ರತಿರೋಧ ಒಡ್ಡಿದ್ದು, ಮೊದಲ ಹಂತದಲ್ಲಿ ಯಶ ಸಾಧಿಸಿದ್ದು, ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಚೆನ್ನಮ್ಮ ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯ ಉಳಿಸಿಕೊಳ್ಳಲು ನಡೆಸಿದ ಅಪ್ರತಿಮ ಹೋರಾಟ ಇಂದಿಗೂ ಜನಮನದಲ್ಲಿ ಅಚ್ಚಳಿಯದೆ ನಿಂತಿದೆ.

ಹಾಗಾಗಿ ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಇಬ್ಬರೂ ನಮ್ಮ ನಡುವೆ ಬಾಳಿ ಹೋದ ಆದರ್ಶಗಳಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button