Kannada NewsKarnataka NewsLatest

ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ ಸಾಹಸಗಳಿಗೆ ಇಂದಿಗೂ ಪ್ರಸ್ತುತ – ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಿವಾಜಿ ಮೊಗಲ್‌ರ ಆಡಳಿತ ಕಾಲದಲ್ಲಿ ಹಿಂದೂ ಸಮ್ರಾಜ್ಯ ಸ್ಥಾಪಿಸಿದರೂ ಸಹ ಪರ ಧರ್ಮ ಸಹಿಷ್ಣುಗಳಾಗಿದ್ದರು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ತಾಲೂಕಿನ ಕಿಣಿಯೇ ಗ್ರಾಮದಲ್ಲಿ ಸೋಮವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದವಿ ಸಾಮ್ರಾಜ್ಯದ ಕನಸನನ್ನು ಸಾಕಾರಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ ಸಾಹಸಗಳಿಗೆ ಇಂದಿಗೂ ಪ್ರಸ್ತುತರಾಗಿದ್ದಾರೆ. ಜತೆಗೆ ಆಡಳಿತದ ವಿಷಯದಲ್ಲೂ ಅವರು ಆದರ್ಶ ವ್ಯಕ್ತಿಯಾಗಿದ್ದರು. ಅವರ ಆಡಳಿತದಲ್ಲಿ ಹಿಂದೂಗಳಿಗೆ ಮಾತ್ರವಲ್ಲ ಮುಸ್ಲಿಂರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದರು. ಮುಸ್ಲಿಂರೂ ಮಸೀದಿಗಳನ್ನು ನಿರ್ಮಿಸಲು ಅನುಮತಿ ನೀಡಿದ್ದರು. ಜ್ಞಾನಕ್ಕೆ ಪ್ರಾಧಾನ್ಯತೆ ನೀಡಿದ್ದ ಛತ್ರಪತಿ ಶಿವಾಜಿ ಮಹಾರಾಜರು ಆಸ್ಥಾನದಲ್ಲಿ ಹಿಂದೂ ಪಂಡಿತರಿಗೆ ನೀಡಿದಷ್ಟೇ ಗೌರವವನ್ನು ಮುಸ್ಲಿಂ ಸಂತರಿಗೆ, ಫಕೀರರಿಗೆ ನೀಡಿದ್ದರು ಎಂದು ತಿಳಿಸಿದರು.

ಅವರ ಸೇನೆಯಲ್ಲೂ ಮುಸ್ಲಿಂರಿದ್ದರು. ಅವರ ಕಾಲದಲ್ಲಿ ಹಿಂದೂ ಮೌಲ್ಯಗಳಿಗೆ ಹಾಗೂ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗಿತ್ತು ಎಂದರು.

ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಶಿವಾಜಿ ಎಂಬುದು ಕೇವಲ ಹೆಸರಲ್ಲ, ಅದು ಭಾರತದ ಯುವ ಶಕ್ತಿಗೆ ಆದರ್ಶ ಎಂಬ ಸ್ವಾಮಿ ವಿವೇಕಾನಂದರ ಹೇಳಿಕೆಯನ್ನು ಉಲ್ಲೇಖಿಸಿದರು.

ಶತ್ರುಗಳಿಗೆ ಸಿಂಹ ಸ್ವಪ್ನವಾಗಿದ್ದ ಶಿವಾಜಿ ಮಹಾರಾಜರು ಸ್ವತಂತ್ರ ಭಾರತದ ಕನಸಿಗೆ ಬೀಜ ಬಿತ್ತಿದ್ದರು. ಹಿಂದೂ ಸಾಮ್ರಾಜ್ಯ ನಿರ್ಮಾಣದಲ್ಲಿ ಯಶಸ್ವಿಯೂ ಆದರು. ಭಾರತ ಸ್ವತಂತ್ರವಾಗಲು ಇರುವುದು ಒಂದೇ ಮಾರ್ಗ, ಅದು ಶಿವಾಜಿ ಮಹಾರಾಜರ ರೀತಿ ಹೋರಾಡುವುದು ಎಂದು ನೇತಾಜಿ ಸುಭಾಶ್ಚಂದ್ರ ಭೋಸ್ ಹೇಳಿದ್ದರು ಎಂದು ಹೇಳಿದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳಿಗೆ ಶಿವಾಜಿ ಮಹಾರಾಜರ ಕೆಚ್ಚೆದೆಯ ಹೋರಾಟದ ಇತಿಹಾಸ ಪ್ರೇರಣಾದಾಕವಾಗಿತ್ತು. ಬ್ರಿಟೀಶರನ್ನು ಭಾರತದಿಂದ ಒದ್ದೋಡಿಸಲು ಯಾವ ಹಿಟ್ಲರ್ ಕೂಡ ಬೇಕಾಗಿಲ್ಲ, ಶಿವಾಜಿಯ ಚರಿತ್ರೆಯನ್ನೊಮ್ಮೆ ಓದಿ ಬಿಡಿ ಸಾಕು ಎಂದು ಜರ್ಮನಿಯ ಅಡಾಲ್ಟ್ ಹಿಟ್ಲರ್ ಹೇಳಿದ್ದರು ಎಂದು ತಿಳಿಸಿದರು.

ಶಿವಾಜಿ ಮಹಾರಾಜರು ಅಮೇರಿಕಾದಲ್ಲಿ ಜನಿಸಿದ್ದರೆ ಅವರನ್ನು ನಾವು ಪ್ರಖರವಾಗಿ ಹೊಳೆಯುವ, ಮುಟ್ಟಿದರೆ ಸುಟ್ಟು ಬೂದಿಯಾಗುವ ಸೂರ್ಯ ಎಂದೇ ಕರೆಯುತ್ತಿದ್ದೆವು ಎಂದು ಬರಾಕ್ ಒಬಾಮಾ ಹೇಳಿದ್ದರೆ ಶಿವಾಜಿ ಮಹಾರಾಜರು ಇನ್ನೂ ೧೦ ವರ್ಷ ಬದುಕಿದ್ದರೆ ನಾವು ಭಾರತಕ್ಕೆ ಬರುವುದಿರಲಿ, ಭಾರತದ ತಂಟೆಗೂ ಬರುತ್ತಿರಲಿಲ್ಲ ಎಂದು ಬ್ರಿಟೀಶ್ ಗವರ್ನರ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಶಿವಾಜಿ ಮಹಾರಾಜರ ಭಾರತದ ದೇಶಪ್ರೇಮದ ಹೋರಾಟಕ್ಕೆ ವಿಶ್ವವೇ ತಲೆಬಾಗಿತ್ತು ಎಂಬುದು ಇತಿಹಾಸದ ದೃಷ್ಟಾಂತಗಳಿಂದ ತಿಳಿಯಬಹುದಾಗಿದೆ ಎಂದು ಚನ್ನರಾಜ ಹೇಳಿದರು.

 

ವಿದೇಶಗಳಲ್ಲೂ ಪಸರಿಸಿದೆ ಶಿವಾಜಿ ಮಹಾರಾಜರ ಶೌರ್ಯದ ಕತೆಗಳು

ಬೋಸ್ಟನ್ ಯುನಿರ್ವಸಿಟಿಯಲ್ಲಿ ವಿದ್ಯಾರ್ಥಿಗಳಿಗೆ ಶಿವಾಜಿ ಮಹಾರಾಜರ ಒಂದು ವಿಷಯವನ್ನೇ ಅಳವಡಿಸಲಾಗಿದೆ. ಪಾಶ್ಚಿಮಾತ್ಯ ದೇಶಗಳೂ ಸಹ ಶಿವಾಜಿ ಮಹಾರಾಜರ ದೇಶಪ್ರೇಮ, ಧರ್ಮನಿಷ್ಠೆ ಮತ್ತು ಹೋರಾಟದ ಕೆಚ್ಚು, ಧೈರ್ಯ ಸಾಹಸಗಳಿಗೆ ತಲೆದೂಗಿವೆ ಎಂದರು.

ಶಿವಾಜಿ ಮಹಾರಾಜರು ಆದರ್ಶ ಆಡಳಿಗಾರರಾಗಿಯೂ ಖ್ಯಾತಿ ಪಡೆದಿದ್ದರು. ಅಪರಾಧ ಮಾಡಿದವರು ಯಾರೇ ಇರಲಿ, ತನ್ನವರು, ಇತರರು ಎಂಬ ಬೇಧ ಎಣಿಸದೆ ಶಿಕ್ಷೆಗೆ ಗುರಿಪಡಿಸುತ್ತಿದ್ದರು. ಒಮ್ಮೆ ಅವರ ಮಗ ಸಂಭಾಜಿ ಏನೋ ಅಪರಾಧ ಮಾಡಿದಾಗ ಆತನಿಗೂ ಸಹ ಸೆರೆಮನೆ ಶಿಕ್ಷೆ ನೀಡಿದ್ದರು. ಅವರು ಜಾತ್ಯತೀತ ರಾಜರಾಗಿದ್ದರು ಮತ್ತು ಅವರ ಸೈನ್ಯ ಮತ್ತು ಕಚೇರಿಯಲ್ಲಿ ಅನೇಕ ಮುಸ್ಲಿಮರನ್ನು ಹೊಂದಿದ್ದರು ಎಂದೂ ಚನ್ನರಾಜ ಹೇಳಿದರು.

ಇಬ್ರಾಹಿಂ ಖಾನ್ ಮತ್ತು ದೌಲತ್ ಖಾನ್ ಅವರು ನೌಕಾಪಡೆಯ ಪ್ರಮುಖರು ಮತ್ತು ಸಿದ್ದಿ ಇಬ್ರಾಹಿಂ ಫಿರಂಗಿದಳದ ಮುಖ್ಯಸ್ಥರಾಗಿದ್ದರು. ಅವರು ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದರು. ಮಹಿಳೆಯರ ಅಪಮಾನವನ್ನು ನಿಷೇಧಿಸುವ ನಿಯಮಗಳನ್ನು ಜಾರಿಗೆ ತಂದಿದ್ದರು. ಮಹಿಳೆಯರ ಮೇಲಿನ ಯಾವುದೇ ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು, ಅವರ ಆಳ್ವಿಕೆಯ ಕಾಲದಲ್ಲಿ ಅನೇಕ ಕಡೆ ಮಹಿಳೆಯರಿಗೆ ಅಧಿಕಾರ ನೀಡಲಾಗಿತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಪಾಟೀಲ್, ಯುವರಾಜ ಕದಂ, ಮಾರುತಿ ಡುಕರೆ, ಮಹೇಶ ಡುಕರೆ, ನಾಮದೇವ ಡುಕರೆ, ಸಂತೋಷ್ ಪಾಟೀಲ್, ಅನೀಲ್ ಪಾಟೀಲ್, ರಾಮನಿಂಗ ದಳವಿ, ಗ್ರಾಮಸ್ಥರು, ಶಿವಾಜಿ ಮಹಾರಾಜರ ಭಕ್ತರು ಮೊದಲಾದವರು ಉಪಸ್ಥಿತರಿದ್ದರು.

ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜನಿಸದಿದ್ದಿದ್ದರೆ ಭಾರತ ಹೇಗಿರುತ್ತಿತ್ತು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ – ಲಕ್ಷ್ಮಿ ಹೆಬ್ಬಾಳಕರ್  

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button