ಮುಖ್ಯಮಂತ್ರಿ ಯಡಿಯೂರಪ್ಪ ಇಂದೇ ರಾತ್ರಿ ವಾಪಸ್
ಪ್ರಗತಿವಾಹಿನಿ ಸುದ್ದಿ, ನವದೆಹಲಿ –
ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ರಾತ್ರಿಯೇ ವಾಪಸ್ಸಾಗಲಿದ್ದಾರೆ. ಬುಧವಾರ ರಾತ್ರಿ ಅವರು ಬೆಂಗಳೂರಿಗೆ ಆಗಮಿಸುವರು. ಮೊದಲಿನ ಪ್ರವಾಸ ಪಟ್ಟಿ ಪ್ರಕಾರ ಅವರು ಗುರುವಾರ ವಾಪಸ್ ಬರಬೇಕಿತ್ತು.
ನೂತನ ಸಚಿವಸಂಪುಟ ರಚನೆ ಸಂಬಂಧ ಹೈಕಮಾಂಡ್ ಒಪ್ಪಿಗೆ ಪಡೆಯುವುದಕ್ಕಾಗಿ ಯಡಿಯೂರಪ್ಪ ನವದೆಹಲಿಗೆ ತೆರಳಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ಸೇರಿದಂತೆ ಕೇಂದ್ರದ ಹಲವು ಮಂತ್ರಗಳನ್ನು ಯಡಿಯೂರಪ್ಪ ಭೇಟಿ ಮಾಡಿದರು. ಜೊತೆಗೆ ಕರ್ನಾಟಕ ಭವನದ ನೂತನ ಕಟ್ಟಡ ನಿರ್ಮಾಣ ದ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರಧಾನಿ ಭೇಟಿ ಮಾಡಿದ ಮುಖ್ಯಮಂತ್ರಿ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳು ಮತ್ತು ಇತರ ವಿಷಯಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರ ವರದಿ ಹಾಗೂ ಮಹಾದಾಯಿ ಜಲ ವಿವಾದ ನ್ಯಾಯಾಧಿಕರಣದ ವರದಿಗಳನ್ನು ಗಜೆಟ್ ಅಧಿಸೂಚನೆ ಹೊರಡಿಸುವಂತೆ ಮತ್ತು ಮೇಕೆದಾಟು ಕುಡಿಯುವ ನೀರು ಕಂ ಬ್ಯಾಲೆನ್ಸಿಂಗ್ ರಿಸರ್ವಯರ್ ಯೋಜನೆಯ ಡಿಪಿಆರ್ ಅನುಮೋದಿಸುವಂತೆ ಮನವಿ ಮಾಡಿದರು.
ಜೊತೆಗೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಆರ್ಥಿಕ ನೆರವು ನೀಡುವಂತೆಯೂ ಮನವಿ ಮಾಡಿದರು.
ಇದಲ್ಲದೆ, ಹುಬ್ಬಳ್ಳಿ-ಧಾರವಾಡದಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ ಸ್ಥಾಪಿಸುವಂತೆ ಕೋರಿದರು.
ಸಚಿವ ನರೇಂದ್ರ ಸಿಂಗ್ ತೋಮರ್ ಭೇಟಿ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃಧ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ನೋಂದಣಿ ಅವಧಿಯನ್ನು ಆಗಸ್ಟ್ 14 ರ ವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು.
ಇದಲ್ಲದೆ, ಬೆಳೆವಿಮೆಯ ಹಿಂದಿನ ಕ್ಲೇಮುಗಳನ್ನು ಇತ್ಯರ್ಥ ಪಡಿಸಲು ಕ್ರಮ ವಹಿಸುವಂತೆಯೂ ಮನವಿ ಮಾಡಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 2019-20ರ ಅನುದಾನ ಬಿಡುಗಡೆ ಹಾಗೂ ರಾಜ್ಯ ಸರ್ಕಾರವು 2015-16, 2016-17 ಮತ್ತು 2019-20ರಲ್ಲಿ ಪಾವತಿಸಿರುವ ಮುಂಗಡ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯದ ಎಲ್ಲ ಅರ್ಹ ರೈತರಿಗೂ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಲೋಕಸಭಾ ಸದಸ್ಯರಾದ ಶೋಭಾ ಕರಂದ್ಲಾಜೆ, ಶಾಸಕರಾದ ಜಗದೀಶ್ ಶೆಟ್ಟರ್ ಮತ್ತು ಆರ್. ಅಶೋಕ್ ಉಪಸ್ಥಿತರಿದ್ದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ರಾಜ್ಯದ ವಿವಿಧ ಯೋಜನೆಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ಕೆಲವು ಪ್ರಮುಖ ಹೆದ್ದಾರಿ ಯೋಜನೆಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವಂತೆ ಹಾಗೂ ಶಿವಮೊಗ್ಗ ನಗರಕ್ಕೆ ವರ್ತುಲ ರಸ್ತೆ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.
ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮತ್ತಿತರ ಅಧಿಕಾರಿಗಳು ಹಾಗೂ ಡಾ.ಪ್ರಭಾಕರ ಕೇರೆ, ಬಸವರಾಜ ಬೊಮ್ಮಾಯಿ, ಮಹಾಂತೇಶ ಕವಟಗಿಮಠ, ಆರ್.ಅಶೋಕ ಮತ್ತು ಸಂಸದರು ಹಾಜರಿದ್ದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10 (29ಎ) ಅನ್ವಯ ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಹಾಗೂ ರಾಜ್ಯದ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 14 ನೇ ಹಣಕಾಸು ಆಯೋಗದಡಿ ಬಾಕಿ ಇರುವ ಕಾರ್ಯನಿರ್ವಹಣಾ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.
ಕರ್ನಾಟಕ ಭವನ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನವದೆಹಲಿಯಲ್ಲಿ ಕರ್ನಾಟಕ ಭವನದ ನೂತನ ಕಟ್ಟಡ ನಿರ್ಮಾಣ ದ ಪ್ರಗತಿ ಪರಿಶೀಲನೆ ನಡೆಸಿದರು.
ಹೊಸ ಕಟ್ಟಡದ ನೀಲಿನಕ್ಷೆ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ನವದೆಹಲಿಯ ಕರ್ನಾಟಕ ಭವನದಲ್ಲಿ ವಿಸ್ತೃತ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು, ಹಳೆಯ ನಕಾಶೆಯಲ್ಲಿ ಕಚೇರಿ ಕಟ್ಟಡಕ್ಕೆ ಎರಡು ಅಂತಸ್ತುಗಳನ್ನು ಕಾಯ್ದಿರಿಸಲಾಗಿದೆ. ಕರ್ನಾಟಕ ಸಂಸ್ಕೃತಿ ಬಿಂಬ ಕಾಣುತ್ತಿಲ್ಲ, ಹೀಗಾಗಿ ಇರುವ ನಕಾಶೆಯಲ್ಲಿ ಬದಲಾವಣೆ ಮಾಡಿ, ಕಚೇರಿ ಕಟ್ಟಡ ಒಂದು ಅಂತಸ್ತಿಗೆ ಮಾತ್ರ ಸೀಮಿತವಾಗಿರಿಸಿಕೊಂಡು, ಅಥಿತಿಗಳ ಕೊಠಡಿ & ಸಂಸ್ಕೃತಿಯ ಪ್ರತಿಬಿಂಬಿಕ್ಕೆ ಆದ್ಯತೆ ನೀಡುವ ಹೊಸ ನೀಲಿನಕ್ಷೆಯನ್ನು ನಾಳೆ ಸಂಜೆಯೊಳಗೆ ಸಿದ್ದಪಡಿಸುವಂತೆ ಹಾಗೂ ಆಗಸ್ಟ್ ೧೫ ರ ಬಳಿಕ ಹಳೆಯ ಕಟ್ಟಡ ತೆರವಿನ ಕೆಲಸಕ್ಕೆ ಚಾಲನೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ಜಗದೀಶ್ ಶೆಟ್ಟರ್ ಹಾಗೂ ಗೋವಿಂದ ಎಂ. ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪೀ. ರವಿಕುಮಾರ್ , ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಕರ್ನಾಟಕ ಭವನದ ನಿವಾಸಿ ಆಯುಕ್ತ ಅತುಲ್ ಕುಮಾರ್ ತಿವಾರಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ