ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ ಆರು ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 191ಕ್ಕೆ ಏರಿಕೆಯಾಗಿದೆ.
ಗೌರಿಬಿದನೂರಿನ 48 ವರ್ಷದ ಮಹಿಳೆಗೆ ಕೊರೊನಾ ದೃಢ ಪಟ್ಟಿದೆ. ಕಳೆದ ವಾರ ಈ ಮಹಿಳೆಯಲ್ಲಿ ನೆಗೆಟಿವ್ ಬಂದಿತ್ತು. ಆದರೆ ಇದೀಗ ಮಹಿಳೆಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈಕೆಯ ಸಹೋದರನಿಂದ (ರೋಗಿ 94) ಮತ್ತು ರೋಗಿ 19ರ ಸಂಪರ್ಕಕ್ಕೆ ಬಂದಿದ್ದರಿಂದ ಕೊರೊನಾ ಬಂದಿದೆ. ಸದ್ಯಕ್ಕೆ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೆಕ್ಕಾದಿಂದ ಗೌರಿಬಿದನೂರಿಗೆ ವಾಪಸ್ಸಾಗಿದ್ದ ಮೊದಲ ರೋಗಿ 19 ಆಗಿದ್ದು, 19 ರ ತಾಯಿ, ತಂದೆ ಮತ್ತು ಇಬ್ಬರೂ ಸಹೋದರಿಯರಿಗೆ ಸೋಂಕು ಕಂಡುಬಂದಿದೆ. ಕಳೆದ ವಾರ ಇಬ್ಬರ ಸಹೋದರಿಯರಲ್ಲಿ ಓರ್ವಳಿಗೆ ಪಾಸಿಟಿವ್ ಬಂದಿದ್ದು, ಮತ್ತೊಬ್ಬಳಿಗೆ ನೆಗೆಟಿವ್ ಬಂದಿತ್ತು. ಇದೀಗ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಿದಾಗ ಪಾಸಿಟಿವ್ ಬಂದಿದೆ. ಈ ಮೂಲಕ ಒಂದೇ ಕುಟುಂಬದ 6 ಜನರಿಗೂ ಸೋಂಕು ಧೃಡವಾಗಿದೆ.
6 ಮಂದಿಯಲ್ಲಿ ಮಗ, ತಾಯಿ ಹಾಗೂ ಚಿಕ್ಕಮ್ಮ ಮೆಕ್ಕಾದಿಂದ ವಾಪಸ್ಸಾಗಿದ್ದರು. ತಂದೆ ಹಾಗೂ ಇಬ್ಬರು ಸಹೋದರಿಯರಿಗೂ ಸೋಂಕು ಬಂದಿದೆ. ಈ ಆರು ಮಂದಿಯಲ್ಲಿ ಮೂವರು ರಾಜೀವ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬುಧವಾರ ತಾಯಿ ಡಿಸ್ಚಾರ್ಜ್ ಆಗಿದ್ದು, ಇಂದು ತಂದೆ ಹಾಗೂ ಚಿಕ್ಕಮ್ಮ ಡಿಸ್ಚಾರ್ಜ್ ಆಗಿದ್ದಾರೆ ಎಂದು ಡಿಸಿ ಆರ್.ಲತಾ ಸ್ಪಷ್ಟನೆ ನೀಡಿದ್ದಾರೆ.
ಇಂದು ರಾಜ್ಯದಲ್ಲಿ 10 ಕೊರೊನಾ ಪ್ರಕರಣ ದಾಖಲಾಗಿದೆ. ಬಾಗಲಕೋಟೆಯಲ್ಲಿ ಮೂರು, ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ 2, ಬೆಳಗಾವಿ, ಮಂಡ್ಯ, ಚಿಕ್ಕಬಳ್ಳಾಪುರದಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ