*ಹಠ ಮಾಡಿದ ಮಗುವಿಗೆ ಅಂಗನವಾಡಿ ಸಹಾಯಕಿಯಿಂದ ಇದೆಂಥಹ ಶಿಕ್ಷೆ: ಡೈಪರ್ ನಲ್ಲಿ ಖಾರದ ಪುಡಿ ಹಾಕಿ, ಕೈಗೆ ಬರೆ ಕೊಟ್ಟು ವಿಕೃತಿ*

ಪ್ರಗತಿವಾಹಿನಿ ಸುದ್ದಿ: ಪುಟ್ಟ ಮಗು ಹಠ ಮಾಡಿದ್ದಕ್ಕೆ ಅಂಗನವಾಡಿ ಸಹಾಯಕಿಯೊಬ್ಬಳು ಮನುಷತ್ವವನ್ನೂ ಮರೆತು ಕ್ರೌರ್ಯ ಮೆರೆದಿದ್ದಾಳೆ. ಮಗುವಿನ ಡೈಪರ್ ಒಳಗೆ ಖಾರದ ಪುಡಿ ಹಾಕಿ, ಕೈಗಳಿಗೆ ಬರೆ ಕೊಟ್ಟು ವಿಕೃತಿ ಮೆರೆದಿದ್ದಾಳೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜಕಟ್ಟಿಯಲ್ಲಿ ಈ ಘಟನೆ ನಡೆದಿದೆ. 2 ವರ್ಷದ ದೀಕ್ಷಿತ್ ಎಂಬ ಮಗುವಿನ ಮೇಲೆ ಅಂಗನವಾಡಿ ಸಹಾಯಕಿ ಚಂದ್ರಮ್ಮ ಚಿತ್ರಹಿಂಸೆ ನೀಡಿ ಶಿಕ್ಷೆ ಕೊಟ್ಟಿದ್ದಾಳೆ.
ರಮೇಶ್ ಹಾಗೂ ಚೈತ್ರಾ ದಂಪತಿ ತಮ್ಮ 2 ವರ್ಷದ ಮಗು ದೀಕ್ಷಿತ್ ನನ್ನು ಅಂಗನವಾಡಿಗೆ ಕಳುಹಿಸುತ್ತಿದ್ದರು. ಮಗು ಎಂದಿನಂತೆ ಹಠ ಮಾಡುತ್ತಿತು. ಇದಕ್ಕೆ ಕೋಪಗೊಂಡ ಅಂಗನವಾಡಿ ಸಹಾಯಕಿ ಮಗುವಿನ ಡೈಪರ್ ಒಳಗೆ ಖಾರದ ಪುಡಿ ಹಾಕಿದ್ದಾಳೆ. ಅಲ್ಲದೇ ಕೈಗಳಿಗೆ ಬರೆ ಕೊಟ್ಟು ಹಲ್ಲೆ ನಡೆಸಿದ್ದಾಳೆ. ಅಂಗನವಾಡಿ ಸಹಾಯಕಿಯ ವಿಕೃತಿಗೆ ಮಗು ನರಳಾಡಿದೆ.
ಮಧ್ಯಾಹ್ನ ಮಗುವನ್ನು ಮನೆಗೆ ಕರೆದುಕೊಂಡು ಹೋಗಲು ಪೋಷಕರು ಅಂಗನವಾಡಿ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೋಷಕರು ಕನಕಪುರ ಟೌನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೂ ದೂರು ನೀಡಿದ್ದು, ಅಂಗನವಾಡಿ ಸಹಾಯಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.