*ಬಾಲ್ಯವಿವಾಹ ಪ್ರಕರಣ ಹೆಚ್ಚಳ: ತಪ್ಪಿತಸ್ಥ ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*
ಶೈಕ್ಷಣಿಕ ಸಾಧನೆಯಲ್ಲಿ ಚಿತ್ರದುರ್ಗ ಜಿಲ್ಲೆ ಕುಸಿತ: ಶಿಕ್ಷಣಾಧಿಕಾರಿಯನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ: ಬಾಲ್ಯವಿವಾಹ ಪಿಡುಗು ಬಹಳ ಗಂಭೀರವಾದ ವಿಷಯವಾಗಿದ್ದು, ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೇ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಿದ್ದು, ನಂ.1 ಸ್ಥಾನ ಪಡೆದಿದೆ. ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಜಾಗೃತಿ ಶಿಬಿರಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲು ಜಿಲ್ಲೆಗೆ ಆಗಮಿಸಿದ್ದೇನೆ. ಜಿಲ್ಲೆಯಲ್ಲಿ ಹೆಚ್ಚಿದ ಬಾಲ್ಯ ವಿವಾಹ ತಡೆಗೆ ಕೈಗೊಂಡ ಕ್ರಮಗಳೇನು? ಯಾವ ಕ್ರಮಗಳು ಕೈಗೊಂಡರೆ ಬಾಲ್ಯವಿವಾಹ ತಡೆಯಲು ಸಾಧ್ಯವಿದೆ? ಅಧಿಕಾರಿಗಳ ಕಾರ್ಯವೈಖರಿ ಏನು? ತಪ್ಪಿತಸ್ಥ ಎಷ್ಟು ಜನರಿಗೆ ಶಿಕ್ಷೆಯಾಗಿದೆ ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ, ಈಗಾಗಲೇ ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಶಿಬಿರ ನಡೆಸಿ ಅರಿವು ಮೂಡಿಸಲಾಗುತ್ತಿದೆ. ಬಾಲ್ಯವಿವಾಹ ನಿಷೇಧ ಅಧಿಕಾರಿಗಳಿಗೂ ಈ ಕುರಿತು ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 87 ದೂರುಗಳು ಬಂದಿದ್ದು, 42 ಪ್ರಕರಣಗಳನ್ನು ತಡೆಯಲಾಗಿದ್ದು, 41 ಬಾಲ್ಯ ವಿವಾಹ ಪ್ರಕರಣಗಳು ನಡೆದಿವೆ, ಈ ಪ್ರಕರಣಗಳಿಗೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ತಾಯಂದಿರ ಮರಣ ಪ್ರಮಾಣ ಒಂದು ಲಕ್ಷ ಜೀವಂತ ಜನನಕ್ಕೆ 83.29 ಇರುವುದು ಕಳವಳಕಾರಿಯಾಗಿದೆ. ತಾಯಂದಿರ ಮರಣ ರಾಜ್ಯ ಪ್ರಮಾಣ ಸರಾಸರಿ 69 ರಷ್ಟಿದೆ. ಸಾಂಸ್ಥಿಕ ಹೆರಿಗೆಯ ನಂತರವೂ ಬಾಣಂತಿಯರು ಸಾವನ್ನಪ್ಪುತ್ತಿರುವುದು ಏಕೆ? ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಹೆರಿಗೆ ನಂತರ ಬಾಣಂತಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲವೇ? ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಅವರನ್ನು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಜುಲೈವರೆಗೆ 5 ಬಾಣಂತಿಯರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ 21 ರಿಂದ 24 ವಯೋಮಾನದವರಾಗಿದ್ದು, ಆಸ್ಪತ್ರೆಯಲ್ಲಿ ಹೆರಿಗೆ ಆದ ಮೇಲೆ ಮನೆಗೆ ತೆರಳಿದ ನಂತರ ಸಾವನ್ನಪ್ಪಿದ್ದಾರೆ ಎಂದು ಡಾ.ಅಭಿನವ್ ತಿಳಿಸಿದರು.
ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಒಂದು ಸಾವಿರ ಜೀವಂತ ಜನನಕ್ಕೆ 13 ಇದೆ. ರಾಜ್ಯದ ಶಿಶು ಪ್ರಮಾಣ ಸರಾಸರಿ 19 ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯ ಶಿಶು ಪ್ರಮಾಣ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ.ಟಿ.ವೆಂಕಟೇಶ್ ಸಚಿವರ ಗಮನಕ್ಕೆ ತಂದರು.
ಚಿತ್ರದುರ್ಗ ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ಅಸಮಾಧಾನ
ಜಿಲ್ಲೆಯ ಮಹಿಳಾ ಸಾಕ್ಷರತಾ ಪ್ರಮಾಣ ಶೇ.65 ರಷ್ಟಿದೆ. ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 21ನೇ ಸ್ಥಾನಕ್ಕೆ ಕುಸಿದಿದೆ ಎಂದು ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಉಸ್ತುವಾರಿ ಉಡುಪಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮ ಕಳೆದ ಬಾರಿ 19ನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಮೊದಲನೆ ಸ್ಥಾನಕ್ಕೆರಿಕೆಯಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಒಟ್ಟಾಗಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಪ್ರಯತ್ನಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಕಳೆದ ಕೆಡಿಪಿ ಸಭೆಯಲ್ಲಿಯೇ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕ್ರಮ ಕೈಗೊಳ್ಳುವ ಕಠಿಣ ನಿರ್ದೇಶನ ನೀಡಿದ್ದೇನೆ. ಫಲಿತಾಂಶ ಇಳಿಕೆಗೆ ಸಂಬಂಧಪಟ್ಟ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಹೊಣೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಅಂಗನವಾಡಿ ಕಟ್ಟಡಕ್ಕೆ ಸಿಎ ನಿವೇಶನ ಹಂಚಿಕೆ
ಅಂಗನವಾಡಿ ಕಟ್ಟಡಕ್ಕೆ ಉಚಿತವಾಗಿ ಸಿಎ ನಿವೇಶನ ಹಂಚಿಕೆ ಮಾಡಲು ಸರ್ಕಾರದಿಂದ ತೀರ್ಮಾನಿಸಲಾಗಿದೆ. ಈ ಬಗ್ಗೆ ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.
ಜಿಲ್ಲೆಯ ಗಣಿಬಾಧಿತ ತಾಲ್ಲೂಕುಗಳಲ್ಲಿ ಕೆ.ಎಂ.ಇ.ಆರ್.ಸಿ ಹಾಗೂ ಅಡಿ.ಎಂ.ಎಫ್ ಅನುದಾನದಡಿ ಅಂಗನವಾಡಿಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ. ಉಳಿದ ತಾಲ್ಲೂಕುಗಳಿಗೆ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ಸಚಿವರು ನೀಡಿದರು.
ಜಿಲ್ಲೆಯಲ್ಲಿ 2428 ಅಂಗನವಾಡಿ ಕೇಂದ್ರಗಳು ಇವೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ 1798 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ 112 ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಲಭ್ಯವಿದೆ. 43 ಸ್ಥಳಗಳಲ್ಲಿ ನಿವೇಶನ ಲಭ್ಯವಿಲ್ಲ. ನಗರ ಪ್ರದೇಶದಲ್ಲಿ 22 ಕಡೆ ನಿವೇಶನ ಲಭ್ಯವಿದ್ದು, 107 ಕಡೆ ನಿವೇಶನ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಮಾಹಿತಿ ನೀಡಿದರು.
ಅಧಿಕಾರಿಗಳ ಗೈರಿಗೆ ಸಚಿವರ ಆಕ್ರೋಶ
ಅಂಗನವಾಡಿ ಕಟ್ಟಡಗಳ ನಿರ್ಮಾಣ ಪ್ರಗತಿ ಪರಿಶೀಲನೆ ವೇಳೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಭೆಗೆ ಗೈರಾಗಿ, ಅವರ ಬದಲು ಸಹಾಯಕ ಇಂಜಿನಿಯರ್ ಸಭೆಗೆ ಆಗಮಿಸಿದ್ದನ್ನು ಗಮನಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರ ಅಸಮಾಧಾನ ಹೊಂದಿ ಸಿಟ್ಟಾದ ಪ್ರಸಂಗ ಸಭೆಯಲ್ಲಿ ನಡೆಯಿತು.
ಅಂಗನವಾಡಿಗಳಿಗೆ ಬಡವರ ಮಕ್ಕಳು ಬರುತ್ತಾರೆ. ಇಲಾಖೆಯ ಅಂಗನವಾಡಿ ಕಟ್ಟಡ ನಿರ್ಮಾಣದ ಪ್ರಮುಖ ಹೊಣೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ್ದಾಗಿದೆ. ಇದುವರೆಗೂ ಜಿ.ಪಂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆಯೇ? ಪಿಆರ್‍ಇಡಿ, ಆರೋಗ್ಯ, ಜಿ.ಪಂ. ಸೇರಿದಂತೆ ಪ್ರಮುಖ ಅಧಿಕಾರಿಗಳು ಸಭೆಗೆ ಗೈರು ಹಾಜರಿಯಾದರೆ ಹೇಗೆ? ಎಂದು ಸಚಿವೆ ಆಕ್ರೋಶ ವ್ಯಕ್ತಪಡಿಸಿದರು.
ಖುದ್ದು ಸಚಿವೆ ಆಗಮಿಸಿ ಪರಿಶೀಲನೆ ನಡೆಸುವ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಜಿಲ್ಲಾಧಿಕಾರಿಗಳು ಸಹ ಅಧಿಕಾರಿಗಳಿಗೆ ನೋಟಿಸ್ ನೀಡಿ. ಇಂದಿನ ಕಾರ್ಯಕ್ರಮಗಳನ್ನು ಮುಗಿಸಿ ಚಿತ್ರದುರ್ಗ ನಗರ ತೊರೆಯುವ ಮುನ್ನವೇ ಖುದ್ದು ನನ್ನ ಬಳಿ ಆಗಮಿಸಿ ಈ ಕುರಿತು ವಿವರಣೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಸಚಿವರು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಹ ಅಧಿಕಾರಿಗಳ ಧೋರಣೆಗೆ ಅಸಮಧಾನ ವ್ಯಕ್ತಪಡಿಸಿ, ಸಚಿವರು ಬಂದರೂ ಸಂಬಂಧಪಟ್ಟ ಇಲಾಖಾ ಅಧಿಕಾರಗಳು ಇಲ್ಲ ಎಂದರೆ ಹೇಗೆ? ಯಾರಿಗೆ ತಿಳಿಸಿ ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುವುದಾಗಿ ಹೇಳಿದರು.
ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗ 192 ಅಂಗನವಾಡಿ ಕಟ್ಟಡ ಪೈಕಿ 100 ಕಟ್ಟಡ ನಿರ್ಮಾಣ ಪೂರ್ಣಗೊಳಿಸಲಾಗಿದೆ. 34 ಕಟ್ಟಡ ಪ್ರಗತಿಯಲ್ಲಿವೆ. 62 ಕಟ್ಟಡ ನಿರ್ಮಾಣ ಪ್ರಾರಂಭಿಸುವುದು ಬಾಕಿಯಿದೆ. ಕೆ.ಆರ್.ಐ.ಡಿ.ಎಲ್ ವತಿಯಿಂದ 72 ಅಂಗನಾಡಿ ಕಟ್ಟಡಗಳ ಪೈಕಿ 52 ಪೂರ್ಣಗೊಂಡಿವೆ. 1 ಕಟ್ಟಡ ಪಗ್ರತಿಯಲಿದ್ದು, 17 ಕಟ್ಟಡ ನಿರ್ಮಾಣ ಪ್ರಾರಂಭವಾಗಿಲ್ಲ. ನಿರ್ಮಿತಿ ಕೇಂದ್ರದಿಂದ 69 ಕಟ್ಟಡಗಳ ಪೈಕಿ 34 ಪೂರ್ಣಗೊಂಡಿದ್ದು 29 ಪ್ರಗತಿಯಲ್ಲಿದೆ, 6 ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರು ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ, ದ್ರಾಕ್ಷರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಶಾಸಕ ಎಂ.ಚಂದ್ರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಗ್ಯಾರೆಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಬಿ.ಎನ್.ಮೈಲಾರಪ್ಪ, ಮಹಿಳಾ ಮತ್ತು ಮಕ್ಕಳ ಇಲಾಖೆ ನಿರ್ದೇಶಕ ಸಿದ್ದೇಶ್ವರ್, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶಕ ರಾಘವೇಂದ್ರ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೊಲೀಸ್ ವರಿಷ್ಧಕಾರಿ ಕರಂಜಿತ್ ಕುಮಾರ್ ಬಂಡಾರು ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ