Belagavi NewsBelgaum NewsKannada NewsKarnataka NewsLatest

ಬಾಲ ಪ್ರತಿಭೆ ದಿಯಾ ಹೆಗಡೆಗೆ ಬೆಳಗಾವಿಯಲ್ಲಿ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಗರ ತಾಲೂಕಿನ ಬಂದಗದ್ದೆ ಗ್ರಾಮ ನಿವಾಸಿ, ಝೀ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ರಾಷ್ಟ್ರಮಟ್ಟದ ಮಕ್ಕಳ ಸಾಹಿತ್ಯ ಜಿಬಿ ಸಮ್ಮೇಳನದಲ್ಲಿ ಸಂಗೀತ ಸಾಧನೆಗಾಗಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾಳೆ.

ಈ ವರ್ಷದ ಮೈಸೂರಿನ ಮಹಿಳಾ ಮತ್ತು ಮಕ್ಕಳ ದಸರಾ ಉತ್ಸವವನ್ನು ಅವಳ ಕೈಯಿಂದ ಉದ್ಘಾಟಿಸುವ ಗೌರವವನ್ನು ರಾಜ್ಯ ಸರ್ಕಾರ ನೀಡಿದೆ. ಸಣ್ಣ ವಯಸ್ಸಿನಲ್ಲೇ ಸಾಧನೆ ತೋರಿದ ಬಾಲ ಪ್ರತಿಭೆ ದಿಯಾ ಹೆಗಡೆಯವರಿಗೆ ಬೆಳಗಾವಿ ಹನುಮಾನ್ ನಗರದ ನಾಗರಿಕರಿಂದ ಅ. 22 ರ ರವಿವಾರ ಹನುಮಾನ್ ನಗರದ ಹನುಮಾನ್ ಮಂದಿರದ ಆವಾರದಲ್ಲಿರುವ ಗ್ಲಾಸ್ ಹೌಸ್ ಸಭಾಗೃಹದಲ್ಲಿ ಬೆಳಗ್ಗೆ 11.30 ಘಂಟೆಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ವೃತ್ತಿಯಲ್ಲಿ ವಕೀಲರಾದ, ಕೃಷಿಕ ಕುಟುಂಬದ ಹಿನ್ನೆಲೆಯ ಬಿ. ಎಂ. ವೆಂಕಟೇಶ ಹಾಗೂ ಅಪರ್ಣಾ ದಂಪತಿ ಪುತ್ರಿ, ಕರ್ನಾಟಕದಾದ್ಯಂತ ಹಾಗೂ ಮಹಾರಾಷ್ಟ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯತೆ ಗಳಿಸಿದ ಅಪರೂಪದ ಬಾಲ ಸಾಧಕಿ. ಪ್ರಾರಂಭದಲ್ಲಿ ಈ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ವಾಹಿನಿಯು ಅವಳನ್ನು ವಿಶೇಷ ಕಲಾವಿದೆಯಾಗಿ ರಾಜ್ಯಕ್ಕೆ 2022-23 ರಲ್ಲಿ ಪರಿಚಯಿಸಿತು. ಬಹುಮುಖ ಪ್ರತಿಭೆಯ ಈ ಬಾಲಕಿಗೆ ಈಗ ರಾಷ್ಟ್ರ ಮಟ್ಟದ ಗೌರವ ಸಂದಿದೆ.
ಕರ್ನಾಟಕದಾದ್ಯಂತ ಸನ್ಮಾನಗೊಂಡ ಅವಳನ್ನು ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಸನ್ಮಾನಿಸಲಾಗುತ್ತಿದೆ.

ಹನುಮಾನ್ ಮಂದಿರದ ಮಹಾಪ್ರಸಾದ ಕಮಿಟಿ ಮತ್ತು ಶ್ರೀ ಲಲಿತಾ ಆರಾಧನಾ ಮಂಡಳಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಬನ್ನಿ ಬಾಲ ಪ್ರತಿಭೆಯನ್ನು ಪ್ರೋತ್ಸಾಹಿಸಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button