*ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರೂ ದೇಶದ ನಿರ್ಮಾತೃಗಳು: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರನ್ನು ಕೇವಲ ಕಾರ್ಮಿಕರು ಎನ್ನುವುದಕ್ಕೆ ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ನನ್ನ ಪ್ರಕಾರ ನೀವೆಲ್ಲರೂ ದೇಶದ ನಿರ್ಮಾತೃಗಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಬಿಡುಗಡೆ ಕಾರ್ಯಕ್ರಮದಲ್ಲಿಮಾತನಾಡಿದ ಡಿಸಿಎಂ, ಕೋವಿಡ್ ಸಮಯದಲ್ಲಿ ನೀವು ನಿಮ್ಮ ಊರಿಗೆ ಹಿಂದಿರುಗುವಾಗ ಬಿಜೆಪಿ ಸರ್ಕಾರ ಮೂರುಪಟ್ಟು ಟಿಕೆಟ್ ದರ ಹಣ ವಸೂಲಿಗೆ ಮುಂದಾಗಿತ್ತು. 700 ರೂ. ಇದ್ದ ಟಿಕೆಟ್ ದರವನ್ನು 2100 ರೂ. ಮಾಡಿತ್ತು. ಯಾದಗಿರಿಯವರು ಬಂದು ನನ್ನನ್ನು ಬೇಟಿ ಮಾಡಿ ಈ ವಿಚಾರ ತಿಳಿಸಿದರು. ಈ ಕಾರ್ಮಿಕರು ಬೆಂಗಳೂರು ಬೆಳೆಸಲು ಇಲ್ಲಿಗೆ ಬಂದವರು. ಕೆಲಸ ಇಲ್ಲದಾಗ ಅವರು ಮೂರುಪಟ್ಟು ಹಣ ಎಲ್ಲಿಂದ ತರುತ್ತಾರೆ. ಹೀಗಾಗಿ ಕಾರ್ಮಿಕರನ್ನು ಉಚಿತವಾಗಿ ಅವರ ಊರಿಗೆ ಕಳುಹಿಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದೆ. ಅವರು ಸ್ಪಂದಿಸಲಿಲ್ಲ.
ಮರುದಿನ ನಾನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದೆ. ನಾನು ಆಗಷ್ಟೇ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೆ. ಸರ್ಕಾರ ಈ ಕಾರ್ಮಿಕರನ್ನು ಉಚಿತವಾಗಿ ಕಳುಹಿಸಬೇಕು. ಇಲ್ಲದಿದ್ದರೆ, ನಾನೇ ಪಕ್ಷದ ಪರವಾಗಿ 1 ಕೋಟಿ ನೀಡುವುದಾಗಿ ಘೋಷಣೆ ಮಾಡಿದೆ. ನಮ್ಮ ಈ ತೀರ್ಮಾನ ಇಡೀ ದೇಶಕ್ಕೆ ಮಾದರಿಯಾಯಿತು. ಒಂದು ವಾರ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಯಿತು. ನಂತರ ರೈಲ್ವೇ ಇಲಾಖೆ ಕೂಡ ಉಚಿತ ರೈಲು ಸಂಚಾರ ವ್ಯವಸ್ಥೆ ನೀಡಿತು ಎಂದರು.
ನಮ್ಮ ಮನೆ, ಈ ಕಟ್ಟಡಗಳು ಇಷ್ಟು ಸುಂದರವಾಗಿ ಕಾಣಲು ನೂರಾರು ಜನರ ಪರಿಶ್ರಮ ಇರುತ್ತದೆ. ಈ ದೇಶ ಎಷ್ಟೇ ಬೆಳೆದರೂ ನಿಮ್ಮ ಶ್ರಮ ಹಾಗೂ ಬೆವರಿಗೆ ನಾವು ಬೆಲೆ ಕಟ್ಟಲು ಆಗುವುದಿಲ್ಲ.
ಮಹಾತ್ಮಾ ಗಾಂಧಿ ಅವರು ಒಂದು ಮಾತು ಹೇಳಿದ್ದಾರೆ. “I learned the value of hard work by working hard.” ಎಂದು. ಅಂದರೆ, “ಕಷ್ಟಪಟ್ಟು ದುಡಿಯುವುದರ ಮೂಲಕ ದುಡಿಮೆಯ ಮೌಲ್ಯ ಅರಿತೆ” ಎಂದರ್ಥ. ಹೀಗಾಗಿ ನಿಮ್ಮನ್ನು ಗೌರವದಿಂದ ಕಾಣಬೇಕು.
ಗಾಂಧಿಜಿ ಅವರು ಇನ್ನು ಒಂದು ಮಾತು ಹೇಳಿದ್ದಾರೆ. ನೀವು ನಿಮ್ಮನ್ನು ಗೆಲ್ಲಬೇಕಾದರೆ ನಿಮ್ಮ ಬುದ್ಧಿ ಉಪಯೋಗಿಸಿ, ನೀವು ಬೇರೆಯವರನ್ನು ಗೆಲ್ಲಬೇಕಾದರೆ ನಿಮ್ಮ ಹೃದಯದಿಂದ ಪ್ರೀತಿಯನ್ನು ಉಪಯೋಗಿಸಿ ಎಂದು ಹೇಳಿದ್ದಾರೆ. ಕೆಲಸಗಾರರು ಯಾರೇ ಆಗಲಿ, ಯಜಮಾನರು ಪ್ರೀತಿಯಿಂದ ನೋಡಿಕೊಂಡರೆ ಅವರು ಹೆಚ್ಚು ಶ್ರಮ ಹಾಕಿ ಕೆಲಸ ಮಾಡುತ್ತಾರೆ ಎಂದರು.
ಈ ಪ್ರಜಾಪ್ರಭುತ್ವ ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ನಾಲ್ಕು ಆಧಾರ ಸ್ಥಂಭಗಳು. ಅದೇ ರೀತಿ ಒಂದು ಸಮಾಜ ಸುಭದ್ರವಾಗಿ ಇರಬೇಕಾದರೆ ಕೃಷಿಕ, ಸೈನಿಕ, ಶಿಕ್ಷಕ, ಕಾರ್ಮಿಕ ಬಹಳ ಮುಖ್ಯ. ನಿಮ್ಮನ್ನು ರಕ್ಷಣೆ ಮಾಡಲು ನರಸಿಂಹರಾವ್ ಅವರ ಕಾಲದಲ್ಲಿ ಕಾನೂನು ತರಲಾಗಿದೆ. ರಾಷ್ಟ್ರ ಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ರಕ್ಷಣೆಗೆ ಕಾನೂನುಗಳನ್ನು ರೂಪಿಸಲಾಗಿದೆ. ನೀವು ಬಲಿಷ್ಠವಾಗಿದ್ದರೆ ಮಾನಸಿಕವಾಗಿ ಗಟ್ಟಿಯಾಗಿದ್ದರೆ ಈ ದೇಶಕೂಡ ಪ್ರತಿ ಹಂತದಲ್ಲಿ ಬಲಿಷ್ಠವಾಗಲಿದೆ.
ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಕಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಚಿವರು ವಿವರಿಸಿದ್ದಾರೆ. ನೀವು ನಿಮ್ಮ ಸಲಹೆಗಳನ್ನು ಸಚಿವರುಗಳಿಗೆ ನೀಡಿ. ನಿಮ್ಮ ಸಲಹೆ ಸ್ವೀಕಾರ ಮಾಡಿ ಅದಕ್ಕೆ ತಕ್ಕಂತೆ ಕಾರ್ಯಕ್ರಮ ರೂಪಿಸಲಾಗುವುದು. ನಿಮ್ಮ ಮಕ್ಕಳು ದೇಶದ ಆಸ್ತಿ. ಅವರ ಭವಿಷ್ಯ ದೇಶದ ಆಸ್ತಿ. ಅಧಿಕಾರವಂತರು, ಶ್ರೀಮಂತರ ಮಕ್ಕಳು ದೊಡ್ಡವರಾಗುವುದಕ್ಕಿಂತ ನಿಮ್ಮ ಮಕ್ಕಳು ದೊಡ್ಡವರಾಗಿ ಬೆಳೆಯಬೇಕು. ಆಗ ಸಮಾಜ ಬೆಳೆಯುತ್ತದೆ ಎಂದು ನಮ್ಮ ಸರ್ಕಾರ ನಂಬಿಕೆ ಇಟ್ಟುಕೊಂಡಿದೆ.
ನಿಮಗೆ ಆರ್ಥಿಕ ಶಕ್ತಿ ತುಂಬಬೇಕು ಎಂದು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಬದುಕಿದ್ದರೆ ನಾಯಕ, ಸತ್ತರೆ ಇತಿಹಾಸ ಎಂಬಂತೆ ನೀವು ನಿಮ್ಮ ಸಂಘಟನೆಯಲ್ಲಿ ಅನೇಕ ಹೋರಾಟ ಮಾಡಿಕೊಂಡು ಬಂದಿದ್ದೀರಿ. ಕಾರ್ಮಿಕರು ಯಾರೇ ಆದರೂ ಅವರು ದೇಶ ನಿರ್ಮಾಣ ಮಾಡುತ್ತಿದ್ದಾರೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಾವದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಈ ಕಾರ್ಮಿಕ ಇಲಾಖೆ ಸಮರ್ಥವಾಗಿ ಸಾಗಲಿದೆ. ನಾವು ಕೂಡ ಈ ಇಲಾಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ