Kannada NewsKarnataka NewsLatest

ಕುಣಿದು ಕುಪ್ಪಳಿಸಿ ಹೆಲಿಕಾಪ್ಟರ್ ನಲ್ಲಿ ರೌಂಡ್ ಹೊಡೆದ ಮಕ್ಕಳು

ಪ್ರಗತಿವಾಹಿನಿ ಸುದ್ದಿ, ಗೋಕಾಕ : ಸದಾ ಒಂದಿಲೊಂದು‌ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮಾನವ ಬಂಧುತ್ವ ವೇದಿಕೆ ಈ ಬಾರಿ ಯುವಜನತೆಯನ್ನು ಸೆಳೆಯುವ ಮೂಲಕ ಹೆಲಿಕಾಪ್ಟರ್  ರೈಡಿಂಗ್ ಅವಕಾಶ ನೀಡಿ  ರಾಜ್ಯದ ಗಮನ ಸೆಳೆಯಿತು.
ಪಟ್ಟಣದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಎಂಬಿವಿ ಆಶ್ರಯದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿನ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಳಿಕ ಹೆಲಿಕಾಪ್ಟರ್ ನಲ್ಲಿ ಗೋಕಾಕ್ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಸುತ್ತ ರೌಂಡ್ ಹೊಡೆಯುವ ಮೂಲಕ ವಿಜೇತ ಯುವಕ-ಯುವತಿಯರಿಗೆ ಹೊಸ ಅನುಭವ ನೀಡಿದರು.
ಸ್ಪರ್ಧಾ ವಿಜೇತ ಯುವಕ -ಯುವತಿಯರು ಹೆಲಿಕಾಪ್ಟರ್ ನ ಜಾಲಿಯಾಗಿ ಸುತ್ತಾಡಿದರು. ಇನ್ನು ಹೆಲಿಕಾಪ್ಟರ್ ನೋಡಲು ಜನ ಜಂಗುಳಿ ಕೂಡಿತ್ತು‌. ವಾಲ್ಮೀಕಿ ಕ್ರೀಡಾಂಗಣ ತುಂಬಿ ತುಳುಕುತ್ತಿತ್ತು. ವಿಶೇಷವಾಗಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆರೆದಿದ್ದರು. ಸಿಳ್ಳೆ ಹೊಡದು ಚಪ್ಪಾಳೆ ತಟ್ಟುವ ಮೂಲಕ ಮೊದಲ ಬಾರಿ ಹೆಲಿಕಾಪ್ಟರ್ ಕಂಡ ಮಕ್ಕಳು ಕುಣಿದು ಕುಪ್ಪಳಿಸಿದರು.
ಪ್ರಬಂಧ ಸ್ಪರ್ಧೆ ವಿಜೇತರ ಹೆಸರು: ಬೆಳಗಾವಿಯ ವೈಷ್ಣವಿ ಕಡೋಲ್ಕರ್,   ಶಿರಗುಪ್ಪಿಯ ಜ್ಯೋತಿ ಗುದ್ದೀನ, ರಾಯಚೂರಿನ ಸುಧಾ ಕರ್ಲಿ, ಯಾದವಾಡದ ಸಿಮ್ರಾನ್ ಬಾಗವಾನ್, ಚಾಮರಾಜನಗರದ ಮಾನಸ ವಿ ಪ್ರಶಸ್ತಿ ಪಡೆದು ಹೆಲಿಕಾಪ್ಟರ್ ‌ನಲ್ಲಿ‌ ಸುತ್ತಾಡಿದರು.
ಭಾಷಣ ಸ್ಪರ್ಧೆ ವಿಜೇತರು:ತೀರ್ಥಹಳ್ಳಿಯ ಪೂಜಾ ತೀರ್ಥಹಳ್ಳಿ, ಘಟಪ್ರಭಾದ ಮುಷ್ರಫ್ ಸಯ್ಯದ, ಕಲಬುರ್ಗಿಯ ಪ್ರಿಯಂಕಾ ಭರಣಿ, ಮೆಳವಂಕಿಯ ಪವಿತ್ರಾ ಹತ್ತರವಾಟ,ಧಾರವಾಡದ ಶ್ವೇತಾ ಜುಗಳೆ, ಕಲಖಾಂಬದ ಶಾಮಲಾ ಭರಮಾ ಹಿರೋಜಿ ಭಾಷಣ ಸ್ಪರ್ಧೆಯಲ್ಲಿ ಪ್ರಶಸ್ತಿ
ಪಡೆದುಕೊಂಡಿದ್ದಾರೆ.

 ಮುಂದೆಯೂ ವಿನೂತನ ಕಾರ್ಯಕ್ರಮ

  ನಮಗಾಗಿ ಹೋರಾಡಿದ ಮಹನಿಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಮುಂದೆಯೂ ಸಹ ಮಹಾನ್ ನಾಯಕರ ಜಯಂತಿಯಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿನ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಮಾತನಾಡಿದರು.
ನಮಗಾಗಿ ಹೋರಾಡಿದ ಮಹನಿಯರನ್ನು, ನಮಗೆ ಶಿಕ್ಷಣ ಕೊಟ್ಟವರನ್ನು ಪೂಜಿಸುವುದು ಬಿಟ್ಟು , ಬೇರೆ ಯ್ಯಾರ ಯ್ಯಾರನ್ನೋ ಪೂಜಿಸುತ್ತೇವೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಸಾವಿತ್ರಿ ಬಾಯಿ ಫುಲೆ, ಶಾಹು ಮಹಾರಾಜ್ , ಶಿವಾಜಿ ಮಹಾರಾಜ್ , ಡಾ. ಬಾಬಾಸಾಹೇಬ ಅಂಬೇಡ್ಕರ್, ಮಹಾತ್ಮಾ ಗಾಂಧಿಜೀ, ಟಿಪ್ಪು ಸುಲ್ತಾನ್  ಸೇರಿ ಅನೇಕ‌ ಮಹನಿಯರು ನಮಗಾಗಿ ಹೋರಾಡಿದ್ದಾರೆ. ಅವರೇನು ಬಡವರಲ್ಲ ಮಹಾರಾಜರು. ಆದರೆ ನಮಗಾಗಿ ಆಸ್ತಿ, ಅಂತಸ್ತು ಎಲ್ಲವನ್ನು ತ್ಯಾಗ ಮಾಡಿ,  ಮಾದರಿಯಾಗಿದ್ದಾರೆ ಎಂದರು.
ಮಹಾನ್ ನಾಯಕ ಜಯಂತಿಯಂದು ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜಿಸುವ‌ ಮೂಲಕ ಮಹಾನ್ ನಾಯಕರ ಬಗ್ಗೆ ಅಪಪ್ರಚಾರ ಮಾಡುವವರಿಗೆ ಈ ವೇದಿಕೆ ಮೂಲಕ ತಕ್ಕ ಉತ್ತರ ನೀಡಿದ್ದೇವೆಂದರು.
ಫುಲೆ ಅವರು ಹಿಂದುಳಿದ ವರ್ಗ ಮಹಿಳೆಯರು ಮುಖ್ಯ ವಾಹಿನಿಗೆ ಬರಬೇಕೆಂದು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅದರ ಫಲವಾಗಿಯೇ ಇಂದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿದೆ.
ಸಂವಿಧಾನ ಇಲ್ಲದಿದ್ರೆ ನನಗೆ ಹಕ್ಕು ಸಿಗುತ್ತಿರಲಿಲ್ಲ. ನಾವು ಸರಿಯಾದ ದಾರಿಯಲ್ಲಿ ಸಾಗಬೇಕಾದ್ರೆ ಸಂವಿಧಾನವನ್ನು ಪಾಲನೆ ಮಾಡಬೇಕು. ಅಂಬೇಡ್ಕರ್, ಗಾಂಧಿ ಇಡೀ ದೇಶಕ್ಕೆ ಹೋರಾಡಿದವರು. ಇಂತಹ ಕಾರ್ಯಕ್ರಮದಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ಭಾಗವಹಿಸಬೇಕು ಎಂದರು.

ಹೆಲಿಕಾಪ್ಟರ್ ಆಕರ್ಷಣೆ :

ಬಾಲ ಗಂಗಾದರ್ ತಿಲಕ್ ಅವರು ಸ್ವತಂತ್ರ ಚಳುವಳಿಯಲ್ಲಿ ಜನರನ್ನು ಜಾಗೃತಿಗೊಳಿಸಲು ಗಣೇಶ ಮೂರ್ತಿ ಕೂಡ್ರಿಸಿದ್ದರು. ಅದೇ ರೀತಿ ನಾವು ಸಹ ಜನರನ್ನು ಕೂಡಿಸಿ ಫುಲೆ ಅವರ ಇತಿಹಾಸ ತಿಳಿಸಲು ಹೆಲಿಕಾಪ್ಟರ್ ಆಕರ್ಷಣೆ ಮಾಡಲಾಗಿದೆ ಹೇಳಿದರು.
ದೇಶಕ್ಕೆ ಕೊಡುಗೆ ನೀಡಿರುವ ಮಹಾನ್ ನಾಯಕರ ಜಯಂತಿಯಂದು ವಿನೂತನ ಕಾರ್ಯಕ್ರಮಗಳನ್ನು ಇನ್ನು ಮುಂದೆ ನಿರಂತರ ನಡೆಯಲಿವೆ . ಮುಂಬರುವ ಶಿವಾಜಿ ಮಹಾರಾಜ್  ಅವರ ಜಯಂತಿಯಂದು ಸಹ  ಪ್ರಬಂಧ, ಭಾಷಣ ಸ್ಪರ್ಧೆ ಏರ್ಡಿಸಲಾಗುತ್ತದೆ. ಹೆಲಿ ಕಾಪ್ಟರ್ ಮತ್ತೆ ಸದ್ದು ಮಾಡಲಿದೆ. ಈ ಮೂಲಕ ಮಹನಿಯರ ಇತಿಹಾಸ ತಿಳಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಈ ಮೊದಲು ಪ್ರಬಂಧ, ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿದರು.
ಸಾಹಿತಿ ಡಾ.ವಿನಯಾ ವಕ್ಕುಂದ, ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ, ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕರ್, ರಾಮಕೃಷ್ಣ ಪಾನಬುಡೆ,ರಿಯಾಜ್ ಚೌಗಲಾ ಸೇರಿದಂತೆ ಮುಂತಾದವರು ಇದ್ದರು. ಮಹಾಲಿಂಗಪ್ಪ ಆಲಬಾಳ ನಿರೂಪಿಸಿ ವಂದಿಸಿದರು‌.

ದೇಶದ ಮೊದಲ ಕವಯಿತ್ರಿ

  ‘ ಮತ್ತೆ ದೇಶ ಜಾತಿ ಎಂಬ ರೋಗದಿಂದ ಬಳಲುತ್ತಿದೆ. ಬ್ರಿಟಿಷರು ಭಾರತಕ್ಕೆ ಬರದಿದ್ರೆ ಕುವೆಂಪು , ಸಾವಿತ್ರಿ ಬಾಯಿ ಫುಲೆ ದಂಪತಿ ಇತಿಹಾಸ ನಮಗೆ ಸಿಗುತ್ತಿರಲಿಲ್ಲ’  ಅಂತಾ ಸಾಹಿತಿ, ಪ್ರಾಧ್ಯಾಪಕಿ ಡಾ.ವಿನಯಾ ಒಕ್ಕುಂದ ಹೇಳಿದರು.
ಇಲ್ಲಿನ ವಾಲ್ಮೀಕಿ ಕ್ರೀಡಾಂಗಣದಲ್ಲಿ  ಮಾನವ ಬಂಧುತ್ವ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ  ಮಾತನಾಡಿದರು.
‘ ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಶಿಕ್ಷಕಿಯಷ್ಟೇ ಅಲ್ಲ,  ದೇಶದ ಮೊದಲ ಕವಯಿತ್ರಿ, ಸಮಾಜ ಸುಧಾರಕಿ. ಇಂದಿನ ಮಕ್ಕಳು ಮೊಬೈಲ್, ಅಂತರ್ಜಾಲದಲ್ಲಿ ಮುಳುಗುತ್ತಿದ್ದಾರೆ. ಅವರಿಗೆ ಒಳಿತಿನ ರುಚಿಯನ್ನ ಉಣ ಬಡಿಸುವ ಜವಾಬ್ದಾರಿ ಪೋಷಕರ ಮೇಲಿದೆ’ ಎಂದರು.
‘ ಹೆಣ್ಣು ಮಕ್ಕಳನ್ನು ಶಾಲೆಗೆ ಕರೆ ತರುವ ಕಠಿಣ ಪರಿಸ್ಥಿತಿ ಇತ್ತು.‌ ಇಂತಹ ಸಂದರ್ಭದಲ್ಲಿ ಮೆಟ್ಟಿನಿಂತು ಸಾವಿತ್ರಿ ಬಾಯಿ ಫುಲೆ ಶಾಲೆಗೆ ತೆರಳಿದವರು. ಫುಲೆ ಅವರು ಮಹಿಳೆಯ ಶಿಕ್ಷಣ ಹೋರಾಟ ಗಮನಿಸಿದ್ರೆ,  ನಮಗೆ ನೆನಪಾಗುವುದು ಎರಡು ಸೀರೆ’ ಎಂದು ಹೇಳಿದರು.
‘ ಫುಲೆ ದಂಪತಿ ಇಡೀ ಬದುಕು ವೈದಿಕ ಸಂಸ್ಕೃತಿಯ ವಿರುದ್ದವಾಗಿತ್ತು. ಹೆಣ್ಣಿನ ಶಿಕ್ಷಣಕ್ಕೆ ತಾಯಿಗಿಂತ ಹೆಚ್ಚಿನ ಮಹತ್ವ ನೀಡಿದ್ದರು ತಾಯಿ ಸಾವಿತ್ರಿ ಬಾಯಿ ಫುಲೆ. ಸತ್ಯ ಶೋಧಕ ಸಂಘಟನೆ ಕಟ್ಟಿ ಬೆಳಸಿದವರು ಫುಲೆ ದಂಪತಿಯಾಗಿದ್ದಾರೆಂದರು.
‘ ಸಾವಿತ್ರಿ ಬಾಯಿ ಇಟ್ಟ ಹೆಜ್ಜೆ ಚಾರಿತ್ರಿಕವಾಗಿದ್ದವು. ಇವರ ಕಾಲ ಗಟ್ಟದಲ್ಲಿಯೇ ಇದ್ದ ಸುಗುಣಾಬಾಯಿ, ರಮಾಬಾಯಿ, ಪಾತಿಮಾ ಶೇಖ್ ವ್ಯಕ್ತಿತ್ವವನ್ನು ನೆನೆಯಬೇಕಾಗಿದೆ’  ಎಂದು ತಿಳಿಸಿದರು.
‘ಫುಲೆ ಅವರ ಕಾಲ ಗಟ್ಟದಲ್ಲಿ ದಲಿತರ ಸ್ಥಿತಿ ಶೋಚನಿಯವಾಗಿತ್ತು. ಕುಡಿಯಲು ಸಹ ನೀರು ಕೊಡದ ಪರಿಸ್ಥಿತಿಯಲ್ಲಿ ತಮ್ಮ ಮನೆಯಲ್ಲಿದ್ದ  ಬಾವಿಯನ್ನೆ  ಫುಲೆ ದಲಿತರಿಗೆ ಬಿಟ್ಟು ಕೊಟ್ಟಿದ್ದರು’  ಎಂದು ಇತಿಹಾಸ ಸ್ಮರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ, ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕರ್, ರಾಮಕೃಷ್ಣ ಪಾನಬುಡೆ,ರಿಯಾಜ್ ಚೌಗಲಾ ಸೇರಿದಂತೆ ಮುಂತಾದವರು ಇದ್ದರು. ಮಹಾಲಿಂಗಪ್ಪ ಆಲಬಾಳ ನಿರೂಪಿಸಿ, ವಂದಿಸಿದರು‌.
ಈ ಸುದ್ದಿ ಓದಿ –

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button