Kannada NewsKarnataka News

ಯಮ ಸಲ್ಲೇಖನ ವೃತ ಘೊಷಣೆ ಮಾಡಿದ ರಾಷ್ಟ್ರಸಂತ ಚಿನ್ಮಯಸಾಗರಜಿ ಮಹಾರಾಜ

ಸಂತೋಷ್ ಕುಮಾರ್ ಕಾಮತ , ಮಾಂಜರಿ – ತಮ್ಮ ಜೀವನದುದ್ದಕ್ಕೂ ಆದಿವಾಸಿ, ವಿವಿಧ ಸಮುದಾಯದ ಏಳಿಗೆಗಾಗಿ ಶ್ರಮಿಸಿರುವ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ನೆಲೆಸಿರುವ ರಾಷ್ಟ್ರಸಂತ ಚಿನ್ಮಯಸಾಗರಜಿ ಮಹಾರಾಜರು ಶನಿವಾರ ಬೆಳಗ್ಗೆ ಯಮ ಸಲ್ಲೇಖನ ವೃತ ಘೊಷಣೆ ಮಾಡಿದ್ದಾರೆ. ತನ್ಮೂಲಕ ಅವರು ಧರ್ಮದ ತತ್ತ್ವಗಳ ಅನುಸಾರ ಶರೀರ ತ್ಯಾಗ ಮಾಡಲಿದ್ದಾರೆ.

ಜೈನ ಧರ್ವಿುಯ ಮುನಿಗಳು ಕೈಗೊಳ್ಳುವ ಅತ್ಯಂತ ಕಠಿಣವಾಗಿರುವ ವೃತ ಯಮಸಲ್ಲೇಖನ ವ್ರತ. ಜೈನಧರ್ಮದ ಪುರಾಣಗಳ ಪ್ರಕಾರ ಪ್ರತೀಕಾರವಿಲ್ಲದ ಉಪಸರ್ಗವಾಗಲೀ, ಮುದಿತನವಾಗಲೀ ಅಥವಾ ರೋಗವಾಗಲೀ ಬಂದ ಬಳಿಕ ಜೈನ ಮುನಿಗಳು ಮೋಕ್ಷ ಅಥವಾ ಸದ್ಗತಿಗಾಗಿ ಶರೀರ ತ್ಯಾಗಮಾಡುವುದಕ್ಕಾಗಿ ಯಮ ಸಲ್ಲೇಖನ ವ್ರತದ ನಿರ್ಧಾರ ಕೈಗೊಳ್ಳುತ್ತಾರೆ.

ಕಠಿಣ ನಿಯಮ ಸಲ್ಲೇಖನ:

ಜುಲೈ 22, 2019ರಿಂದ ಕಠಿಣ ನಿಯಮ ಸಲ್ಲೇಖನ ವೃತ ಕೈಗೊಂಡಿರುವ ರಾಷ್ಟ್ರಸಂತ ಚಿನ್ಮಯಸಾಗರಜಿ ಮಹಾರಾಜರು, ಕೇವಲ ನೀರನ್ನು ಮಾತ್ರ ಸೇವಿಸುತ್ತಿದ್ದರು. ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿರುವುದರಿಂದ ಶನಿವಾರ ಬೆಳಗ್ಗೆಯಿಂದ ಅತ್ಯಂತ ಕಠಿಣವಾಗಿರುವ ಯಮ ಸಲ್ಲೇಖನ ವ್ರತ (ನೀರು ಕೂಡ ಸೇವಿಸುವುದಿಲ್ಲ) ಕೈಗೊಳ್ಳುವುದಾಗಿ ಭಕ್ತರಿಗೆ ತಿಳಿಸಿದ್ದಾರೆ.
ಮೂಲತಃ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಜನಿಸಿರುವ ಚಿನ್ಮಯಸಾಗರಜೀ ಮಹಾರಾಜರು, ಜೈನ ಧರ್ಮದ ಅಹಿಂಸಾ ತತ್ತ್ವಳಿಗೆ ಆಕರ್ಷಿತರಾಗಿ 33 ವರ್ಷಗಳ ಹಿಂದೆ 31-3-1988 ರಂದು ಸೋನಾಗಿರಿಯಲ್ಲಿ ಅವರಿಂದ ಮುನಿ ದೀಕ್ಷೆ ಪಡೆದುಕೊಂಡರು.

ಬಳಿಕ ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ತಲಾ 2 ವರ್ಷ ಹಾಗೂ ಮಧ್ಯಪ್ರದೇಶದಲ್ಲಿ 15 ವರ್ಷ, ಛತ್ತಿಸಘಡದಲ್ಲಿ 2 ವರ್ಷ, ಮಹಾರಾಷ್ಟ್ರ ಮತ್ತು ಕರ್ನಾಟಕ ತಲಾ 5 ವರ್ಷಗಳ ಕಾಲ ಆದಿವಾಸಿಗಳ ಮತ್ತು ಸಮಾಜದ ವಿವಿಧ ಸಮುದಾಯದ ಜನತೆಯಲ್ಲಿ ಅಹಿಂಸಾ ತತ್ತ್ವಗಳನ್ನು ಬೋಧಿಸುವುದರ ಜೊತೆ, ದುಶ್ಚಟಗಳಿಂದ ಮುಕ್ತಿ ಕೊಡಿಸುವುದಕ್ಕಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಆದಿವಾಸಿಗಳನ್ನು ದುಶ್ಚಟದಿಂದ ಮುಕ್ತಗೊಳಿಸಿರುವುದಕ್ಕಾಗಿ ಅಮೇರಿಕೆ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ, ಛತ್ತಿಸಗಢದಲ್ಲಿ ಹಿಂದುಳಿದ ವರ್ಗದ ಜನತೆ ಸ್ವಾವಲಂಬಿ ಜೀವನ ಸಾಗಿಸುವುದಕ್ಕಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಚಿನ್ಮಯಸಾಗರಜಿ ಮಹಾರಾಜರು ಟ್ರಸ್ಟವೊಂದನ್ನು ಸ್ಥಾಪಿಸಿ, ಅದರ ಮೂಲಕ ಸಹಸ್ರಾರು ಜನತೆ ಬದುಕಿಗೆ ಬೆಳಕಾಗಿದ್ದಾರೆ.  ರಾಷ್ಟ್ರಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಅವರು ಹೊಂದಿದ್ದಾರೆ.

ಬಿಗಿ ಬಂದೋಬಸ್ತ್:

ಚಿನ್ಮಯಸಾಗರಜಿ ಮಹಾರಾಜರು ಯಮ ಸಲ್ಲೇಖನ ವ್ರತ ಸುದ್ದಿ ಕೇಳಿ ದೇಶದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಕಾಗವಾಡ ತಾಲೂಕಿನ ಜುಗೂಳ ಗ್ರಾಮಕ್ಕೆ ಹರಿದು ಬರುತ್ತಿರುವುದರಿಂದ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲದೇ ಜನಸಂದಣಿ ನಿಯಂತ್ರಣಕ್ಕಾಗಿ ಪೊಲೀಸ್ ಸರ್ಪಗಾವಲು ಹಾಕಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button