
ಪ್ರಗತಿವಾಹಿನಿ ಸುದ್ದಿ : ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಎಸಿ ಸ್ಲೀಪರ್ ಕೋಚ್ ಬಸ್ಗೆ ಎದುರಿನಿಂದ ವೇಗವಾಗಿ ಬಂದ ಕಂಟೈನರ್ ಲಾರಿ ಡಿವೈಡರ್ ದಾಟಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದ್ದು 9 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಐಜಿಪಿ ರವಿಕಾಂತೇಗೌಡ ಮಾತನಾಡಿದ್ದು, ಸೀಬರ್ಡ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 8 ಮಂದಿ ಹಾಗೂ ಲಾರಿ ಚಾಲಕ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬಸ್ಸಿನಿಂದ ಈವರೆಗೆ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಲಾರಿ ಚಾಲಕ ಸೇರಿ ಪ್ರಾಥಮಿಕ ಮಾಹಿತಿಯಂತೆ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಶಿರಾ ಹಾಗೂ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವವರನ್ನು ಅಂಬುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಡಿಎನ್ಎ ಹಾಗೂ ಸುಕೋ ತಂಡಗಳು ಬೆಂಗಳೂರಿನಿಂದ ಸ್ಥಳಕ್ಕೆ ಆಗಮಿಸಿವೆ ಎಂದರು.
ಚಿತ್ರದುರ್ಗ ಎಸ್ ಪಿ ರಂಜಿತ್ ಮಾತನಾಡಿ, ಸೀಬರ್ಡ್ ಬಸ್ಸಿನಲ್ಲಿ ಇದ್ದ 21 ಮಂದಿ ಗುರುತು ಪತ್ತೆಯಾಗಿದ್ದು, 11 ಮಂದಿ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದಾರೆ ಎಂದು ತಿಳಿಸಿದರು.
ಲಾರಿ ಚಾಲಕ ನಿದ್ದೆ ಮಂಪರಿನಲ್ಲಿ ಇದ್ದ ಕಾರಣ ಅಪಘಾತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ ಒಟ್ಟು 32 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


