ಪ್ರಗತಿವಾಹಿನಿ ಸುದ್ದಿ: ಸಿಐಡಿ ಅಧಿಕಾರಿಯೇ ಸರ್ಕಾರಿ ಕೆಲಸ ಕೊಡಿಸುವುದಾಗಿ 40 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ಹಣ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ ಬೆಂಗಳೂರಿನ ಸಿಐಡಿ ಘಟಕದಲ್ಲಿ ಸೆಕ್ಷನ್ ಸೂಪರಿಂಟೆಂಡೆಂಟ್ ಆಗಿದ್ದ ಅನಿತಾ.ಬಿ.ಎಸ್ ಹಾಗೂ ರಾಮಚಂದ್ರ ಭಟ್ ಅವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ಸುನಿಲ್ ಎಂಬುವವರಿಗೆ ಬರೋಬ್ಬರಿ 40 ಲಕ್ಷ ರೂ. ವಂಚನೆ ಮಾಡಿದ್ದಾರೆ. ರಾಮಚಂದ್ರ ಭಟ್ ಎನ್ನುವವರು ಸಿಐಡಿ ಇಲಾಖೆ ಅಧಿಕಾರಿ ಅನಿತಾ ಅವರನ್ನು ಭೇಟಿ ಮಾಡಿಸಿ ಪರಿಚಯ ಮಾಡಿಕೊಟ್ಟಿದ್ದಾರೆ. ಈ ವೇಳೆ ನಿರುದ್ಯೋಗಿ ಯುವಕ ಸುನೀಲ್‌ಗೆ ಕೆಪಿಎಸ್‌ಸಿ ನೇಮಕಾತಿಯ ಮೂಲಕ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಯನ್ನು ಕೊಡಿಸುದಾಗಿ ನಂಬಿಸಿದ್ದರು. ಇದಕ್ಕೆ ಹಂತ ಹಂತವಾಗಿ ನೀನು ಹಣ ಕೊಟ್ಟರೆ ಕೆಲಸ ಕೊಡಿಸುವುದಾಗಿ ತಿಳಿಸಿ ನಲವತ್ತು ಲಕ್ಷ ರೂ.ವರೆಗೆ ಹಣ ಪಡೆದಿದ್ದಾರೆ. ಆದರೆ, ಕೆಲಸ ಮಾತ್ರ ಕೊಡಿಸಿಲ್ಲ. ಹಣ ಕಳೆದುಕೊಂಡ ಸುನೀಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ